ಹೊಸದಿಗಂತ ವರದಿ ಮಡಿಕೇರಿ:
ದಕ್ಷಿಣ ಕೊಡಗಿನಲ್ಲಿ ಹುಲಿಗಳ ಹಾವಳಿ ಮುಂದುವರಿದಿದ್ದು, ಹುಲಿ ದಾಳಿಗೆ ಮತ್ತೊಂದು ಎಮ್ಮೆ ಬಲಿಯಾಗಿದೆ.
ಪೊನ್ನಂಪೇಟೆ ತಾಲೂಕಿನ ಬಾಡಗರಕೇರಿ ಗ್ರಾಮದಲ್ಲಿ ಮೇಯಲು ಕಟ್ಟಿದ್ದ ಎಮ್ಮೆ ಮೇಲೆ ಭಾನುವಾರ ಸಂಜೆ ಹುಲಿ ದಾಳಿ ನಡೆಸಿರುವುದಾಗಿ ಹೇಳಲಾಗಿದೆ. ಈ ಎಮ್ಮೆ ಗ್ರಾಮದ ರೈತ ಚಂದ್ರಶೇಖರ್ ಸೇರಿದ್ದೆನ್ನಲಾಗಿದೆ.
ಕೊಡಗಿನ ವಿವಿಧೆಡೆಗಳಲ್ಲಿ ಅದರಲ್ಲೂ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ವನ್ಯಜೀವಿ ಹಾಗೂ ಮಾನವ ಸಂಘರ್ಷ ದಿನೇದಿನೇ ಹೆಚ್ಚುತ್ತಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಸಾರ್ವಜನಿಕರ ಬೇಡಿಕೆಗೆ ಅರಣ್ಯ ಇಲಾಖೆಯಿಂದಾಗಲಿ, ಸರಕಾರದಿಂದಾಗಲಿ ಯಾವುದೇ ಸ್ಪಂದನೆ ದೊರಕುತ್ತಿಲ್ಲ ಎಂದು ಆ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.
ಕಾಫಿ ತೋಟಗಳಲ್ಲಿ ದುಡಿಯುವ ಕಾರ್ಮಿಕರು, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪ್ರಾಣಭಯದಿಂದಲೇ ಓಡಾಡುವಂತಾಗಿದೆ. ಕಾಡಾನೆಗಳು ಹಾಗೂ ಹುಲಿಗಳ ಹಾವಳಿಯಿಂದಾಗಿ ಬೆಳಗ್ಗೆ ಮನೆ ಬಿಟ್ಟವರು ಸಂಜೆ ಜೀವಂತವಾಗಿ ಮನೆ ಸೇರುತ್ತೇವೆ ಎಂಬ ಭರವಸೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವವರಲ್ಲಿ ಉಳಿದಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.