ಚಾಂಪಿಯನ್ಸ್ ಟ್ರೋಫಿ ನಲ್ಲಿ ಮತ್ತೊಂದು ವಿವಾದ: ಪಾಕಿಸ್ತಾನದಿಂದ ಭಾರತವನ್ನು ಹೊರತುಪಡಿಸಿ ಉಳಿದ ದೇಶಗಳ ಧ್ವಜ ಹಾರಾಟ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಚಾಂಪಿಯನ್ಸ್ ಟ್ರೋಫಿ ಆರಂಭವಾಗುವ ಮುನ್ನವೇ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇದೀಗ ತನ್ನ ನೀಚ ಬುದ್ದಿಯಿಂದ ಐಸಿಸಿಯಿಂದ ಛೀಮಾರಿಗೆ ಗುರಿಯಾಗುವ ಸಾಧ್ಯತೆಗಳಿವೆ.

ಏಕೆಂದರೆ ಭಾರತದ ಮೇಲೆ ಸದಾ ಹಲ್ಲು ಮಸೆಯುವ ಪಾಕಿಸ್ತಾನ ಇದೀಗ ಐಸಿಸಿ ಈವೆಂಟ್​ನಲ್ಲೂ ಭಾರತಕ್ಕೆ ಅವಮಾನ ಮಾಡುವ ಕೆಲಸಕ್ಕೆ ಕೈಹಾಕಿದೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಈ ಪೈಕಿ 7 ದೇಶಗಳ ಧ್ವಜಗಳನ್ನು ಕರಾಚಿಯ ಗಡಾಫಿ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಹಾರಿಸಲಾಗಿದೆ. ಆದರೆ ಭಾರತದ ತ್ರಿವರ್ಣ ಧ್ವಜವನ್ನು ಮಾತ್ರ ಅಲ್ಲಿ ಹಾರಿಸಲಾಗಿಲ್ಲ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಧ್ವಜಗಳ ಹಾರಾಟದ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಭಾರತದ ಬಾವುಟ ಇಲ್ಲದಿರುವುದು ಭಾರತೀಯರನ್ನು ಕೆರಳುವಂತೆ ಮಾಡಿದೆ.

ನಿಯಮದ ಪ್ರಕಾರ, ಐಸಿಸಿ ಟೂರ್ನಮೆಂಟ್‌ನ ಪಂದ್ಯಗಳಿಗೆ ಆತಿಥ್ಯವಹಿಸುವ ಎಲ್ಲಾ ಕ್ರೀಡಾಂಗಣದ ಮೇಲ್ಛಾವಣಿಯ ಮೇಲೆ ಈ ಟೂರ್ನಿಯಲ್ಲಿ ಭಾಗವಹಿಸುವ ಎಲ್ಲಾ ದೇಶಗಳ ಧ್ವಜವನ್ನು ಹಾರಿಸಲಾಗುತ್ತದೆ. ಆದರೆ ಪಿಸಿಬಿ ಈ ನಿಯಮವನ್ನು ಪಾಲಿಸಲಿಲ್ಲ. ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ಹೋಗದ ಕಾರಣ, ಪಿಸಿಬಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ.

ವಾಸ್ತವವಾಗಿ ಟೀಂ ಇಂಡಿಯಾ ಪಾಕಿಸ್ತಾನಕ್ಕೆ ತೆರಳದಿರುವ ವಿಚಾರವಾಗಿಯೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಪ್ರತಿಷ್ಠೆಯ ಕದನ ಏರ್ಪಟ್ಟಿತ್ತು. ಇದರಲ್ಲಿ ಕೊನೆಗೂ ಪಾಕಿಸ್ತಾನವೇ ತಲೆಭಾಗಬೇಕಾಯಿತು. ಆ ಪ್ರಕಾರ ಇದೀಗ ಟೀಂ ಇಂಡಿಯಾ ತನ್ನೇಲ್ಲ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಭಾರತ ಮೇಲುಗೈ ಸಾಧಿಸಿದ್ದರಿಂದ ಪಾಕಿಸ್ತಾನ ಸಿಟ್ಟಾಗಿದ್ದು, ಬಹುಶಃ ಅದಕ್ಕಾಗಿಯೇ ತ್ರಿವರ್ಣ ಧ್ವಜವನ್ನು ಹಾರಿಸದಿರಲು ನಿರ್ಧರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!