ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 113 ರನ್ ಗಳಿಂದ ಸೋಲು ಕಂಡಿದೆ. ಈ ಮೂಲಕ ಭಾರತ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ.
ಪುಣೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ 259 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಭಾರತ 156 ರನ್ ಗಳಿಗೆ ಆಲೌಟ್ ಆಗುವ ಮೂಲಕ 103 ರನ್ ಗಳ ಹಿನ್ನಡೆ ಅನುಭವಿಸಿತ್ತು. ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ನ್ಯೂಜಿಲ್ಯಾಂಡ್ 255 ರನ್ ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತಕ್ಕೆ ಗೆಲ್ಲಲು 359 ರನ್ ಗಳ ಗುರಿ ನೀಡಿತ್ತು. ಈ ರನ್ ಗುರಿ ಬೆನ್ನಟ್ಟಿದ ಭಾರತ 245 ರನ್ ಗಳಿಗೆ ಆಲೌಟ್ ಆಗುವ ಮೂಲಕ 113 ರನ್ ಗಳಿಂದ ಸೋಲು ಕಂಡಿದೆ.
ಎರಡನೇ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಬ್ಯಾಟ್ಸಮನ್ ಗಳು ಲಯ ಕಂಡುಕೊಳ್ಳುವಲ್ಲಿ ವಿಫಲವಾಗಿದೆ. ರೋಹಿತ್ ಶರ್ಮಾ 8 ಮತ್ತು ವಿರಾಟ್ ಕೊಹ್ಲಿ 17 ರನ್ ಹಾಗೂ ರಿಷಬ್ ಪಂತ್ ಶೂನ್ಯ ಸುತ್ತಿದ್ದು ತಂಡಕ್ಕೆ ಹಿನ್ನಡೆಯಾಯಿತು. ಇನ್ನು ಯಶಸ್ವಿ ಜೈಸ್ವಾಲ್ 77 ರನ್ ಸಿಡಿಸುವ ಮೂಲಕ ಭಾರತಕ್ಕೆ ಚೇತರಿಕೆ ತಂದುಕೊಟ್ಟರು. ಆದರೆ ನಂತರ ಬಂದ ಬ್ಯಾಟರ್ ಗಳು ಹೆಚ್ಚು ಕಾಲ ಕ್ರಿಸ್ ನಲ್ಲಿ ನಿಂತು ಆಡುವಲ್ಲಿ ವಿಫಲರಾದರು.
ಶುಭ್ಮನ್ ಗಿಲ್ 23, ವಾಷಿಂಗ್ಟನ್ ಸುಂದರ್ 21, ಅಶ್ವಿನ್ 18 ರನ್ ಸಿಡಿಸಿ ಔಟಾದರೆ ರವಿಂದ್ರ ಜಡೇಜಾ 42 ರನ್ ಸಿಡಿಸಿ ಔಟಾದರು. ನ್ಯೂಜಿಲ್ಯಾಂಡ್ ಪರ ಮಿಚೆಲ್ ಸ್ಯಾಂಟ್ನರ್ 6 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.