January20, 2026
Tuesday, January 20, 2026
spot_img

ಮತ್ತೆ ಕೈಕೊಟ್ಟ ಯುದ್ಧ ವಿಮಾನ: ಬ್ರಿಟನ್‌ ಅತ್ಯಾಧುನಿಕ ಎಫ್ -35 ಬಿ ಫೈಟರ್ ಜೆಟ್ ತುರ್ತು ಭೂಸ್ಪರ್ಶ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಜಪಾನ್‌ನ ಕಾಗೋಶಿಮಾ ವಿಮಾನ ನಿಲ್ದಾಣದಲ್ಲಿ ಬ್ರಿಟನ್‌ನ ಅತ್ಯಾಧುನಿಕ ಯುದ್ಧ ವಿಮಾನ ಎಫ್ -35 ಬಿ ಫೈಟರ್ ಜೆಟ್ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿದೆ.

ಎಫ್-35ಬಿ ಫೈಟರ್ ಜೆಟ್ ದೋಷ ಎದುರಿಸುತ್ತಿರುವುದು ಇದು ಎರಡನೇ ಸಲ. ಜೂನ್ 14 ರಂದು, ಯುಕೆಯಿಂದ ಆಸ್ಟ್ರೇಲಿಯಾಕ್ಕೆ ತೆರಳುತ್ತಿದ್ದ ಎಫ್-35ಬಿ ಫೈಟರ್ ಜೆಟ್, ಹೈಡ್ರಾಲಿಕ್ ವೈಫಲ್ಯವನ್ನು ಎದುರಿಸಿದ ನಂತರ ಕೇರಳದ ತಿರುವನಂತಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು. ಇದೀಗ ಮತ್ತೆ ತಾಂತ್ರಿಕ ದೋಷವನ್ನು ಎದುರಿಸಿದೆ.

ಯುಕೆ ನೌಕಾಪಡೆಯ ವಿಮಾನವಾಹಕ ನೌಕೆ ಎಚ್‌ಎಂಎಸ್‌ ಪ್ರಿನ್ಸ್ ಆಫ್ ವೇಲ್ಸ್‌ನ ಭಾಗವಾಗಿದ್ದ ಈ ಎಫ್‌-35ಬಿ ಯುದ್ಧ ವಿಮಾನ ಅರಬ್ಬೀ ಸಮುದ್ರದಲ್ಲಿ ಜೂನ್‌ 14ರಂದು ಅಭ್ಯಾಸ ನಡೆಸುತ್ತಿತ್ತು. ಈ ವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ಮತ್ತೆ ಯುದ್ಧ ವಾಹಕದಲ್ಲಿ ಇಳಿಯಲು ಸಾಧ್ಯವಾಗದೇ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು. ತಾಂತ್ರಿಕ ತಂಡ ಎಷ್ಟೇ ಪ್ರಯತ್ನಪಟ್ಟರೂ ರಿಪೇರಿ ಸಾಧ್ಯವಾಗಲಿಲ್ಲ. ಬಳಿಕ ಬ್ರಿಟನ್‌ನಿಂದ ವಿಶೇಷ ತಜ್ಞರ ತಂಡ ಬಂದಿತ್ತು. ಈ ವೇಳೆ ಇದನ್ನು ಏರ್ ಇಂಡಿಯಾದ ಹ್ಯಾಂಗರ್‌ಗೆ ಅಂದರೆ ವಿಮಾನಗಳನ್ನು ರಿಪೇರಿ ಮಾಡುವ ಜಾಗಕ್ಕೆ ಸ್ಥಳಾಂತರಿಸಲಾಗಿತ್ತು.

ಈ ಯುದ್ಧ ವಿಮಾನ ವಿಶೇಷ ಲ್ಯಾಂಡಿಂಗ್ ಮತ್ತು ಟೇಕ್-ಆಫ್ ಫೀಚರ್‌ ಅನ್ನು ಹೊಂದಿದೆ. ಚಿಕ್ಕ ಯುದ್ಧನೌಕೆಗಳಿಂದ ಅಥವಾ ಯಾವುದೇ ಸಣ್ಣ ಜಾಗದಿಂದ ಅತಿ ಕಡಿಮೆ ದೂರ ಟೇಕ್‌ಆಫ್ ಆಗಬಲ್ಲದು. ಇದು ದೂರದಿಂದಲೇ ಮಿಸೈಲ್‌ ಮೂಲಕ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಷ್ಟೇ ಅಲ್ಲದೆ, ಆಕಾಶದಲ್ಲಿಯೇ ಬೇರೆ ವಿಮಾನಗಳೊಂದಿಗೆ ಯುದ್ಧ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇಹುಗಾರಿಕೆ ಅಥವಾ ಸ್ಪೈ ಚಟುವಟಿಕೆಗಳಿಗೆ ಇದನ್ನು ಬಳಸಲಾಗುತ್ತದೆ. ಇಷ್ಟೆಲ್ಲಾ ವಿಶೇಷತೆಗಳಿದ್ದರೂ ಪದೇ ಪದೇ ರೀತಿ ತಾಂತ್ರಿಕ ದೋಷ ಎದುರಿಸುತ್ತಿರುವುದು ಕುತೂಹಲ ಮೂಡಿಸಿದೆ.

Must Read