ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತೀಯ ಟೆಲಿವಿಷನ್‌ನಲ್ಲಿ ಅತ್ಯಂತ ಜನಪ್ರಿಯವಾಗಿರುವ ಹಾಸ್ಯಪ್ರಧಾನ ಶೋ ಎಂದರೆ ಕಪಿಲ್ ಶರ್ಮಾ ಶೋ. ಪ್ರೇಕ್ಷಕರನ್ನು ನಗಿಸುವ ಈ ಕಾರ್ಯಕ್ರಮ ಹಲವು ಬಾರಿ ವಿವಾದಗಳಿಂದಲೂ ಸುದ್ದಿಯಾಗಿದೆ. ಒಂದು ಕಾಲದಲ್ಲಿ ಕಪಿಲ್ ಶರ್ಮಾ ಹಾಗೂ ಸುನಿಲ್ ಗ್ರೋವರ್ ನಡುವೆ ನಡೆದ ಜಗಳವೇ ಶೋ ಭವಿಷ್ಯವನ್ನು ಬದಲಿಸಿತ್ತು. ಈಗ ಮತ್ತೆ ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುತ್ತಿರುವ ದಿ ಗ್ರೇಟ್ ಇಂಡಿಯನ್ ಕಪಿಲ್ ಶೋ ಹೊಸ ಹಂಗಾಮಾ ಸೃಷ್ಟಿಸಿದೆ. ಈ ಬಾರಿ ಕಪಿಲ್ ಅಥವಾ ಸುನಿಲ್ ಅಲ್ಲ, ಬದಲಿಗೆ ಕೃಷ್ಣ ಅಭಿಷೇಕ್ ಮತ್ತು ಕಿಕು ಶಾರ್ದಾ ನಡುವಿನ ವಾಗ್ವಾದವೇ ಚರ್ಚೆಗೆ ಕಾರಣವಾಗಿದೆ.
ಶೂಟಿಂಗ್ ಸಂದರ್ಭದಲ್ಲಿ ಕಿಕು ಅವರು ಕೃಷ್ಣನಿಗೆ “ಟೈಮ್ ಪಾಸ್ ಮಾಡ್ತಿದ್ದೀಯಾ?” ಎಂದು ಪ್ರಶ್ನಿಸಿದರು. ಇದರಿಂದ ಕೋಪಗೊಂಡ ಕೃಷ್ಣ “ಹಾಗಿದ್ದರೆ ನಾನು ಇಲ್ಲಿಂದ ಹೋಗ್ತೀನಿ” ಎಂದು ಪ್ರತಿಕ್ರಿಯಿಸಿದರು. ಕಿಕು ಕೂಡ ತಕ್ಷಣ ಉತ್ತರಿಸುತ್ತಾ, “ನನ್ನ ಕೆಲಸ ಮುಗಿಸಿಕೊಳ್ಳಲು ನಾನು ಇಲ್ಲಿದ್ದೀನಿ” ಎಂದು ಹೇಳಿದರು.
ಇಬ್ಬರೂ ಪರಸ್ಪರ ಗೌರವವಿರುವುದಾಗಿ ಹೇಳಿಕೊಂಡರೂ ಧ್ವನಿ ಏರಿಕೆಯ ಬಗ್ಗೆ ಚರ್ಚೆ ಮುಂದುವರಿಯಿತು. ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ಹತೋಟಿಗೆ ತರಲು ಪ್ರಯತ್ನಿಸಿದರು.
ಈ ಜಗಳ ನಿಜವಾಗಿಯೂ ನಡೆದಿದೆ ಎನ್ನುವುದೇ ಅಥವಾ ಶೋಗೆ ಪಬ್ಲಿಸಿಟಿಗಾಗಿ ಸ್ಕ್ರಿಪ್ಟ್‌ನ ಭಾಗವೇ ಎನ್ನುವುದು ಈಗ ಎಲ್ಲರ ಕುತೂಹಲವಾಗಿದೆ. ಕಾರಣ, ಕೃಷ್ಣ ಮತ್ತು ಕಿಕು ಇಬ್ಬರೂ ಹಳೆಯ ಗೆಳೆಯರು. ಹೀಗಾಗಿ, ಇದು ನಿಜವಾದ ಜಗಳವಲ್ಲದೇ ಕೇವಲ ಹಾಸ್ಯಮಯ ನಾಟಕವೂ ಆಗಿರಬಹುದು.