ಅಫ್ಘಾನ್ ಮಹಿಳೆಯರ ಮತ್ತೊಂದು ಸ್ವಾತಂತ್ರ‍್ಯ ಕಿತ್ತುಕೊಂಡ ತಾಲಿಬಾನ್ ಸರಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಫ್ಘಾನಿಸ್ತಾನದಲ್ಲಿ ಆಡಳಿತ ನಡೆಸುತ್ತಿರುವ ತಾಲಿಬಾನ್ ಸರಕಾರ ಅಫ್ಘಾನ್ ಮಹಿಳೆಯರ ಸ್ವಾತಂತ್ರ‍್ಯವನ್ನು ಮತ್ತಷ್ಟು ನಿರ್ಬಂಧಿಸುವ ಹೊಸ ಸುಗ್ರೀವಾಜ್ಞೆಯನ್ನು ಹೊರಡಿಸಿದೆ.

ಮಹಿಳೆಯರು ಪರಸ್ಪರರ ಉಪಸ್ಥಿತಿಯಲ್ಲಿ ಗಟ್ಟಿಯಾಗಿ ಪ್ರಾರ್ಥನೆ ಮಾಡುವುದನ್ನು ನಿಷೇಧಿಸಲಾಗಿದೆ. ಸದ್ಗುಣ ಪ್ರಚಾರ ಮತ್ತು ದುಷ್ಕೃತ್ಯಗಳ ತಡೆಗಟ್ಟಲು ಈ ಆದೇಶವನ್ನು ಹೊರಡಿಸಲಾಗುತ್ತಿದೆ ಎಂದು ತಾಲಿಬಾನ್ ಸಚಿವ ಮೊಹಮ್ಮದ್ ಖಾಲಿದ್ ಹನಾಫಿ ಹೇಳಿದ್ದಾರೆ.

ಮಹಿಳೆಯರು ಇತರ ಮಹಿಳೆಯರ ಬಳಿ ಇರುವಾಗ ಕುರಾನ್ ಅನ್ನು ಶ್ರವ್ಯವಾಗಿ ಪಠಿಸುವುದನ್ನು ತಪ್ಪಿಸಬೇಕು ಎಂದು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಮಹಿಳೆಯ ಧ್ವನಿಯನ್ನು ಇಲ್ಲಿ ‘ಅವ್ರಾ’ ಎಂದು ಪರಿಗಣಿಸಲಾಗುತ್ತದೆ. ಒಬ್ಬ ಮಹಿಳೆಯ ಅವ್ರಾವನ್ನು ಇತರ ಮಹಿಳೆಯರು ಸಹ ಸಾರ್ವಜನಿಕವಾಗಿ ಕೇಳಬಾರದು ಎಂದು ಹೇಳುವ ಮೂಲಕ ಹನಾಫಿ ಈ ನಿರ್ಬಂಧವನ್ನು ಸಮರ್ಥಿಸಿದ್ದಾರೆ.

ಈ ಹೊಸ ನಿರ್ಬಂಧವು ಮಹಿಳೆಯರಲ್ಲಿ ಮುಕ್ತವಾಗಿ ಮಾತನಾಡುವ ಸಾಮರ್ಥ್ಯವನ್ನು ಪ್ರತಿಬಂಧಿಸಬಹುದೆಂದು ತಜ್ಞರು ಕಳವಳ ವ್ಯಕ್ತಪಸಿದ್ದಾರೆ. ಇದರಿಂದಾಗಿ ಮಹಿಳೆಯರು ಸಾರ್ವಜನಿಕ ಜೀವನದಿಂದ ಮತ್ತಷ್ಟು ದೂರ ಸರಿಯಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

2021ರಲ್ಲಿ ಅಧಿಕಾರಕ್ಕೆ ಮರಳಿದ ತಾಲಿಬಾನ್ ಅಫ್ಘಾನ್ ಮಹಿಳೆಯರ ಮೇಲೆ ಹಲವು ನಿರ್ಬಂಧ ಹೇರಿದೆ. ಮಹಿಳೆಯರು ಸಾರ್ವಜನಿಕವಾಗಿದ್ದಾಗ ಮುಖದ ಮುಸುಕು ಸೇರಿದಂತೆ ಸಂಪೂರ್ಣ ದೇಹ ಮುಚ್ಚುವಂತೆ ಬಟ್ಟೆ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಮನೆಯ ಹೊರಗೆ ಕೆಲಸ ಮಾಡಲು ಅನುಮತಿಸಲಾದ ಕೆಲವು ಅಫ್ಘಾನ್ ಮಹಿಳೆಯರು ಸಾರ್ವಜನಿಕವಾಗಿ, ವಿಶೇಷವಾಗಿ ಪುರುಷ ಸಂಬಂಧಿಕರೊಂದಿಗೆ ಮಾತನಾಡುವುದನ್ನು ನಿರ್ಬಂಧಿಸಲಾಗಿದೆ. ಕೆಲಸ ಮತ್ತು ಶಿಕ್ಷಣಕ್ಕೆ ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕುಟುಂಬದ ಗಂಡಸಿನ ಜೊತೆ ಇಲ್ಲದಂತೆ ಮಹಿಳೆ ಏಕಾಂಗಿಯಾಗಿ ಓಡಾಡುವಂತಿಲ್ಲ ಎಂಬ ನಿಯಮ ಹೇರಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!