ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಲೆನಾಡಿಗರಿಗೆ ಭೀತಿ ಹುಟ್ಟಿಸಿರುವ ಮಂಗನ ಕಾಯಿಲೆಗೆ ಸಿದ್ದಾಪುರ ತಾಲೂಕಿನಲ್ಲಿ ಮತ್ತೊಂದು ಸಾವಾಗಿದೆ. ಸಿದ್ದಾಪುರದ ಐದು ವರ್ಷದ ಬಾಲಕಿ ಮಂಗನ ಕಾಯಿಲೆಗೆ ಮೃತಪಟ್ಟಿದ್ದಾಳೆ.
ಈ ಮೂಲಕ ಮಂಗನ ಕಾಯಿಲೆಯಿಂದ ಜಿಲ್ಲೆಯಲ್ಲಿ ಇತ್ತೀಚೆಗೆ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದ್ದು, ಮಲೆನಾಡು ಪ್ರದೇಶದ ಜನರಲ್ಲಿ ಆತಂಕ ಶುರುವಾಗಿದೆ. ಬಾಲಕಿಯ ಆರೋಗ್ಯ ಹದಗೆಟ್ಟಿದ್ದರಿಂದ ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾಳೆ.
ಸಿದ್ದಾಪುರ ತಾಲ್ಲೂಕಿನಲ್ಲೇ ಸುಮಾರು 90 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಇತರ ತಾಲ್ಲೂಕುಗಳಲ್ಲಿ ಒಟ್ಟು 99 ಪ್ರಕರಣಗಳು ಈವರೆಗೆ ಪತ್ತೆಯಾಗಿವೆ ಎನ್ನಲಾಗಿದೆ.