ಹೊಸದಿಗಂತ ಡಿಜಿಟಲ್ ಡೆಸ್ಕ್
ಮೀನು ಹಿಡಿಯಲು ತೆರಳಿದ್ದ ಇಬ್ಬರಲ್ಲಿ ಓರ್ವ ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಗುರುಪುರ ಸಮೀಪದ ಕೊಳದಬದಿ ಎಂಬಲ್ಲಿ ಶುಕ್ರವಾರ ಸಂಜೆ ವೇಳೆ ನಡೆದಿದೆ.
ಪ್ರವೀಣ್(48) ನೀರು ಪಾಲಾದ ವ್ಯಕ್ತಿ.
ಗುರುಪುರದ ಕೊಟ್ಟಾರಿ ಗುಡ್ಡೆ ನಿವಾಸಿ ಪ್ರವೀಣ್ ತನ್ನ ಸ್ನೇಹಿತ ಜೈಸನ್ ಜತೆಯಲ್ಲಿ ಇಲ್ಲಿನ ಕೊಳದಬದಿ ಎಂಬಲ್ಲಿರುವ ಬ್ರಹತ್ ಕೊಳದಲ್ಲಿ ಮೀನು ಹಿಡಿಯಲು ತೆರಳಿದ್ದ.
ಸ್ನೇಹಿತರಿಬ್ಬರು ಮೀನಿಗಾಗಿ ಬಲೆ ಹಾಕಿ ಕಾದಿದ್ದರು. ಸ್ವಲ್ಪ ಸಮಯದ ನಂತರ ಬಲೆಯನ್ನು ಮೇಲಕ್ಕೆ ಎತ್ತಿ ಮನೆಯತ್ತ ಹೊರಡಲು ತಯಾರಿ ನಡೆಸಿದ್ದರು, ಈ ವೇಳೆ ಪ್ರವೀಣ್ ಮತ್ತೊಮ್ಮೆ ಕೊಳದ ಸನಿಹಕ್ಕೆ ಮೀನು ಇದೆಯೇ ಎಂದು ನೋಡಲು ವಾಪಸ್ ಹೋಗಿದ್ದ ವೇಳೆ ಕತ್ತಲೆಯಲ್ಲಿ ಪೊದೆಗಳು ತುಂಬಿದ್ದ ಜಾಗದಲ್ಲಿ ಕೆಸರಿಗೆ ಇಳಿದಿದ್ದು, ಸ್ನೇಹಿತ ವಾಪಾಸ್ ಬರದೇ ಹೋದಾಗ ಕೂಗಿದರೂ ಪ್ರತಿಕ್ರಿಯೆ ಬಾರದೆ ಇದ್ದುದನ್ನು ಕಂಡು ಜೈಸನ್ ಸ್ಥಳೀಯರಿಗೆ ಸುದ್ದಿ ತಿಳಿಸಿದ್ದಾನೆ. ಮಾಹಿತಿ ಪಡೆದ ಬಜಪೆ ಪೋಲೀಸರು ಸ್ಥಳಕ್ಕೆ ಧಾವಿಸಿದ್ದು, ಮಂಗಳೂರಿನಿಂದ ಆಗಮಿಸಿರುವ ಅಗ್ನಿ ಶಾಮಕ ದಳ ಕೆಸರಲ್ಲಿ ಹೂತು ಹೋಗಿರುವ ಪ್ರವೀಣ್ ಮೃತದೇಹವನ್ನು ಮೇಲೇತ್ತುವ ಕಾರ್ಯಾಚರಣೆ ನಡೆಸುತ್ತಿದೆ. ಪ್ರವೀಣ್ ಅಕಸ್ಮಾತ್ ಕೆಸರಿಗೆ ಜಾರಿದ್ದು ಮೇಲೆ ಬರಲಾರದೇ ಕೆಸರಲ್ಲಿ ಹೂತು ಹೋಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.