Saturday, January 3, 2026

ಬಾಂಗ್ಲಾದಲ್ಲಿ ಮತ್ತೊಬ್ಬ ಹಿಂದು ಉದ್ಯಮಿ ಬಲಿ: ಚಿಕಿತ್ಸೆ ಫಲಕಾರಿಯಾಗದೆ ಕೊಂಕನ್ ಚಂದ್ರ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದು ಸಮುದಾಯದ ವಿರುದ್ಧ ನಡೆಯುತ್ತಿರುವ ಹಿಂಸಾಚಾರ ಮತ್ತೊಂದು ಜೀವವನ್ನು ಬಲಿ ಪಡೆದಿದೆ. ಮಾರಣಾಂತಿಕ ದಾಳಿಯಿಂದ ಪಾರಾಗಿ ಬದುಕುಳಿದಿದ್ದ ಉದ್ಯಮಿ ಕೊಂಕನ್ ಚಂದ್ರ (50) ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದಾಗಿ ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.

ಕೇಔರ್‌ಬಂಗಾ ಪ್ರದೇಶದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಕೊಂಕನ್ ಚಂದ್ರ ಬುಧವಾರ ರಾತ್ರಿ ಸುಮಾರು 9 ಗಂಟೆಗೆ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಕಿಡಿಗೇಡಿಗಳಿಂದ ಭೀಕರ ಹಲ್ಲೆಗೆ ಒಳಗಾಗಿದ್ದರು. ದುಷ್ಕರ್ಮಿಗಳು ಹಲವು ಬಾರಿ ಹೊಟ್ಟೆಗೆ ಚಾಕುವಿನಿಂದ ಇರಿದು, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರೆಂದು ಹೇಳಲಾಗಿದೆ.

ಇದನ್ನೂ ಓದಿ:

ಗಂಭೀರ ಗಾಯಗಳ ನಡುವೆಯೂ ಪವಾಡ ಸದೃಶವಾಗಿ ಕೊಂಕನ್ ಚಂದ್ರ ಪ್ರಾಣ ಉಳಿಸಿಕೊಂಡಿದ್ದರು. ಬೆಂಕಿಯಿಂದ ತಪ್ಪಿಸಿಕೊಳ್ಳಲು ಅವರು ಸಮೀಪದಲ್ಲಿದ್ದ ಕೆರೆಗೆ ಜಿಗಿದಿದ್ದು, ಸ್ಥಳೀಯರು ಅವರನ್ನು ರಕ್ಷಿಸಿ ತಕ್ಷಣ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ವೇಳೆ ಅವರ ಸ್ಥಿತಿ ಗಂಭೀರವಾಗಿದ್ದು, ಕೊನೆಗೆ ಅವರು ಸಾವನ್ನಪ್ಪಿದ್ದಾರೆ.

ಕಳೆದ ಎರಡು ವಾರಗಳಲ್ಲಿ ಬಾಂಗ್ಲಾದೇಶದಲ್ಲಿ ಹಿಂದು ಸಮುದಾಯದ ಮೇಲೆ ವರದಿಯಾಗಿರುವ ನಾಲ್ಕನೇ ಹಿಂಸಾತ್ಮಕ ಘಟನೆ ಇದಾಗಿದೆ. ನಿರಂತರ ದಾಳಿಗಳು ದೇಶದ ಒಳಗೇ ಆತಂಕವನ್ನು ಹೆಚ್ಚಿಸುತ್ತಿದ್ದು, ಅಲ್ಪಸಂಖ್ಯಾತರ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳು ಉದ್ಭವಿಸುತ್ತಿವೆ.

error: Content is protected !!