ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಬಾಹ್ಯಾಕಾಶ ಸಂಶೋಧನೆಯಲ್ಲಿ ಇಸ್ರೋ ಮತ್ತೊಂದು ಮಹತ್ವದ ಮೈಲಿಗಲ್ಲು ದಾಖಲಿಸಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ PSLV-C62 ರಾಕೆಟ್ ಮೂಲಕ EOS-N1 ‘ಅನ್ವೇಷಾ’ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಕಳುಹಿಸಲಾಗಿದೆ. ಇದು 2026ರ ಮೊದಲ ಬಾಹ್ಯಾಕಾಶ ಮಿಷನ್ ಆಗಿದ್ದು, ಬೆಳಗ್ಗೆ 10.17ಕ್ಕೆ ರಾಕೆಟ್ ಆಕಾಶಕ್ಕೆ ಜಿಗಿಯಿತು.
DRDO ಅಭಿವೃದ್ಧಿಪಡಿಸಿದ ಈ ಹೈಪರ್‌ಸ್ಪೆಕ್ಟ್ರಲ್ ಭೂ-ವೀಕ್ಷಣಾ ಉಪಗ್ರಹವು ಕಣ್ಗಾವಲು ಮತ್ತು ರಕ್ಷಣಾ ಉದ್ದೇಶಗಳಿಗೆ ಅತ್ಯಂತ ಪ್ರಮುಖವಾಗಿದೆ. 400 ಕೆ.ಜಿ ತೂಕದ ಅನ್ವೇಷಾ, ಸುಮಾರು 600 ಕಿಮೀ ಎತ್ತರದ ಕಕ್ಷೆಯಲ್ಲಿ ಭೂಮಿಯನ್ನು ಸುತ್ತಲಿದೆ. ಈ ಉಪಗ್ರಹ ಸೇರಿದಂತೆ ಒಟ್ಟು 14 ದೇಶೀಯ ಮತ್ತು ವಿದೇಶಿ ಉಪಗ್ರಹಗಳನ್ನು PSLV-C62 ಯಶಸ್ವಿಯಾಗಿ ಹೊತ್ತೊಯ್ದಿದೆ.
ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿರುವ ಅನ್ವೇಷಾ, ವಸ್ತುಗಳ ಬಣ್ಣ ಮಾತ್ರವಲ್ಲದೆ ಅವುಗಳ ‘ಸ್ಪೆಕ್ಟ್ರಲ್ ಸಿಗ್ನೇಚರ್’ ಅನ್ನು ಗುರುತಿಸುವ ಸಾಮರ್ಥ್ಯ ಹೊಂದಿದೆ. ಇದರ ಮೂಲಕ ಗಡಿ ಪ್ರದೇಶಗಳಲ್ಲಿ ಶತ್ರುಗಳ ಚಲನವಲನ, ಹೊಸ ಕಟ್ಟಡ ನಿರ್ಮಾಣ, ಕ್ಷಿಪಣಿ ಉಡಾವಣಾ ತಾಣಗಳು ಹಾಗೂ ಭೂಗತ ಚಟುವಟಿಕೆಗಳನ್ನು ನಿಖರವಾಗಿ ಪತ್ತೆಹಚ್ಚಬಹುದು. ಪಾಕಿಸ್ತಾನ ಮತ್ತು ಚೀನಾ ಗಡಿಗಳ ಮೇಲಿನ ನಿಗಾವನ್ನು ಇನ್ನಷ್ಟು ಬಲಪಡಿಸುವಲ್ಲಿ ಇದು ಮಹತ್ವದ ಪಾತ್ರ ವಹಿಸಲಿದೆ.
ರಕ್ಷಣೆಯ ಹೊರತಾಗಿ ಕೃಷಿ, ಮಣ್ಣಿನ ತೇವಾಂಶ, ಮಾಲಿನ್ಯ ಮೇಲ್ವಿಚಾರಣೆ ಹಾಗೂ ಖನಿಜ ಸಂಪನ್ಮೂಲ ಗುರುತಿಸುವಲ್ಲಿಯೂ ಈ ಉಪಗ್ರಹ ಬಳಕೆಯಾಗಲಿದೆ. ಭಾರತದ ‘ಬಾಹ್ಯಾಕಾಶದ ಕಣ್ಣು’ ಎಂದು ಅನ್ವೇಷಾವನ್ನು ಕರೆಯಲಾಗುತ್ತಿದೆ.

