ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ದಿಢೀರ್ ನಿವೃತ್ತಿ ತೆಗೆದುಕೊಂಡಿದ್ದರು. ಇದರ ಬೆನ್ನಲ್ಲೇ ಇದೀಗ ಶ್ರೀಲಂಕಾ ತಂಡದ ಸ್ಟಾರ್ ಆಲ್ರೌಂಡರ್ ಹಾಗೂ ಮಾಜಿ ನಾಯಕ ಏಂಜೆಲೊ ಮ್ಯಾಥ್ಯೂಸ್ ಕೂಡ ನಿವೃತ್ತಿ ಘೋಷಿಸಿದ್ದಾರೆ.
ಏಂಜೆಲೊ ಮ್ಯಾಥ್ಯೂಸ್ ಅವರು ಸಾಮಾಜಿಕ ಜಾಲತಾಣದಲ್ಲಿ ನಿವೃತ್ತಿ ಕುರಿತು ಪೋಸ್ಟ್ ಒಂದನ್ನು ಶೇರ್ ಮಾಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ನನ್ನ ಪ್ರೀತಿಯ ಸ್ನೇಹಿತರೇ ಮತ್ತು ಕುಟುಂಬದವರೆ, ಆಟದ ಅತ್ಯಂತ ಪ್ರೀತಿಯ ರೂಪವಾದ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವ ಸಮಯ ಬಂದಿದೆ. ಕಳೆದ 17 ವರ್ಷಗಳಿಂದ ಶ್ರೀಲಂಕಾ ಪರ ಕ್ರಿಕೆಟ್ ಆಡುವುದು ನನ್ನ ಅತ್ಯಂತ ದೊಡ್ಡ ಗೌರವ ಮತ್ತು ಹೆಮ್ಮೆ. ರಾಷ್ಟ್ರೀಯ ಜೆರ್ಸಿ ಧರಿಸುವುದರಿಂದ ಬರುವ ದೇಶಭಕ್ತಿಯ ಭಾವನೆಯನ್ನು ಯಾರೂ ಸರಿಗಟ್ಟಲು ಸಾಧ್ಯವಿಲ್ಲ. ನಾನು ಕ್ರಿಕೆಟ್‌ಗೆ ನನ್ನ ಸರ್ವಸ್ವವನ್ನೂ ನೀಡಿದ್ದೇನೆ ಮತ್ತು ಪ್ರತಿಯಾಗಿ ಕ್ರಿಕೆಟ್ ನನಗೆ ಎಲ್ಲವನ್ನೂ ನೀಡಿದೆ ಮತ್ತು ನಾನು ಇಂದಿನ ವ್ಯಕ್ತಿಯನ್ನಾಗಿ ಮಾಡಿದೆ ಎಂದು ಬರೆದುಕೊಂಡಿದ್ದಾರೆ.
ಆಯ್ಕೆದಾರರೊಂದಿಗೆ ಚರ್ಚಿಸಿದಂತೆ, ನಾನು ಟೆಸ್ಟ್ ಸ್ವರೂಪಕ್ಕೆ ವಿದಾಯ ಹೇಳಿದ್ದೇನೆ. ಆದ್ರೆ, ನನ್ನ ದೇಶಕ್ಕಾಗಿ ನಾನು ವೈಟ್ ಬಾಲ್ ಕ್ರಿಕೆಟ್‌ಗೆ ಲಭ್ಯವಿರುತ್ತೇನೆ ಎಂದು ಏಂಜೆಲೊ ಮ್ಯಾಥ್ಯೂಸ್ ಹೇಳಿದ್ದಾರೆ.
ಏಂಜೆಲೊ ಮ್ಯಾಥ್ಯೂಸ್ 2009 ರಲ್ಲಿ ಗಾಲೆಯಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅವರ 16 ವರ್ಷಗಳ ಟೆಸ್ಟ್ ವೃತ್ತಿಜೀವನದಲ್ಲಿ ಅವರು 118 ಟೆಸ್ಟ್ ಪಂದ್ಯಗಳಲ್ಲಿ ಅವರು 44.63 ಸರಾಸರಿಯಲ್ಲಿ 8,167 ರನ್ ಗಳಿಸಿದ್ದಾರೆ.