ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭಾ ಚುನಾವಣೆಗೆ ಬಿಜೆಪಿ ಇಂದು ಅಭ್ಯರ್ಥಿಗಳ ಮತ್ತೊಂದು ಪಟ್ಟಿ ಬಿಡುಗಡೆ ಮಾಡಿದ್ದು, ಚಂಡಿಗಢದ ಹಾಲಿ ಸಂಸದೆ ನಟಿ ಕಿರಣ್ ಖೇರ್ ಅವರಿಗೆ ಟಿಕೆಟ್ ಕೈ ತಪ್ಪಿದೆ ಅವರ ಬದಲಿಗೆ ಸಂಜಯ್ ಟಂಡನ್ ಅವರಿಗೆ ಟಿಕೆಟ್ ನೀಡಲಾಗಿದೆ.
ಮೊದಲ ಹಂತದ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಉರಿ ಬಿಸಿಲಿನ ಮಧ್ಯೆ ರಾಜಕೀಯ ನಾಯಕರು ಮತ ಪ್ರಚಾರದ ಕಸರತ್ತು ನಡೆಸುತ್ತಿದ್ದಾರೆ. 9 ಅಭ್ಯರ್ಥಿಗಳಿರುವ ಮತ್ತೊಂದು ಪಟ್ಟಿಯನ್ನು ಬಿಜೆಪಿ ಇಂದು ಬಿಡುಗಡೆ ಮಾಡಿದೆ.
ಚಂಡಿಗಢದ ಹಾಲಿ ಸಂಸದೆ ನಟಿ ಕಿರಣ್ ಖೇರ್ ಅವರಿಗೆ ಟಿಕೆಟ್ ತಪ್ಪಿದೆ. ಅವರ ಬದಲಾಗಿ ಅಲ್ಲಿ ಸಂಜಯ್ ಟಂಡನ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಉತ್ತರ ಪ್ರದೇಶದ ಮೈನ್ಪುರಿ ಕ್ಷೇತ್ರದಿಂದ ಜೈ ವೀರ್ ಸಿಂಗ್ ಠಾಕೂರ್ ಅವರಿಗೆ ಟಿಕೆಟ್ ನೀಡಲಾಗಿದ್ದು, ಇಲ್ಲಿ ಸಮಾಜವಾದಿ ಪಕ್ಷವೂ ಅಖಿಲೇಶ್ ಯಾದವ್ ಪತ್ನಿ ಡಿಂಪಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಹೀಗಾಗಿ ಈ ಕ್ಷೇತ್ರ ಕುತೂಹಲ ಕೆರಳಿಸಿದೆ
ಪಶ್ಚಿಮ ಬಂಗಾಳದ ಅಸಂಸೋಲ್ ಕ್ಷೇತ್ರದಿಂದ ಎಸ್ ಎಸ್ ಅಹ್ಲುವಾಲಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಅಹ್ಲುವಾಲಿಯಾ ಅವರು ಪ್ರಸ್ತುತ ಪಶ್ಚಿಮ ಬಂಗಾಳದ ಬರ್ಧಮಾನ್ ದುರ್ಗಾಪುರ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಫುಲ್‌ಪುರ್ ಕ್ಷೇತ್ರದಿಂದ ಪ್ರವೀಣ್ ಪಟೇಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಗೆಯೇ ಅಲಹಾಬಾದ್ ಪ್ರಯಾಗ್ ರಾಜ್‌ನಿಂದ ನೀರಜ್ ತ್ರಿಪಾಠಿ ಅವರಿಗೆ ಟಿಕೆಟ್ ನೀಡಲಾಗಿದೆ. ಅಲಹಾಬಾದ್‌ನಲ್ಲಿ ಹಾಲಿ ಸಂಸದ ಡಾಕ್ಟರ್ ರೀಟಾ ಬಹುಗುಣ ಜೋಷಿ ಅವರಿಗೆ ಟಿಕೆಟ್ ಮಿಸ್ ಆಗಿದ್ದು, ಪ್ರಸ್ತುತ ಇಲ್ಲಿ ಟಿಕೆಟ್ ಸಿಕ್ಕಿರುವ ನೀರಜ್ ತ್ರಿಪಾಠಿ ಮಾಜಿ ಸ್ಪೀಕರ್ ಕೇಸ್ರೀನಾಥ್ ತ್ರಿಪಾಠಿ ಅವರ ಪುತ್ರನಾಗಿದ್ದಾರೆ. ಕೌಸುಂಬಿಯಿಂದ ವಿನೋದ್ ಸೋನ್ಕರ್ ಅವರಿಗೆ ಟಿಕೆಟ್ ಸಿಕ್ಕಿದೆ. ಮಾಜಿ ಪ್ರಧಾನಿ ದಿವಂಗತ ಚಂದ್ರಶೇಖರ್ ಅವರ ಪುತ್ರ ನೀರಜ್ ಶೇಖರ್ ಅವರಿಗೆ ಬಲ್ಲಿಯಾ ಕ್ಷೇತ್ರದಿಂದ ಟಿಕೆಟ್ ಸಿಕ್ಕಿದೆ.
ಒಟ್ಟು 9 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಇದರಲ್ಲಿ 7 ಉತ್ತರ ಪ್ರದೇಶಕ್ಕೆ ಸೇರಿದ ಕ್ಷೇತ್ರಗಳಾಗಿದ್ದರೆ ಪಶ್ಚಿಮ ಬಂಗಾಳ ಹಾಗೂ ಚಂಡಿಗಢದ ತಲಾ ಒಂದೊಂದು ಕ್ಷೇತ್ರಗಳಿವೆ. ಫುಲ್‌ಪುರ್ ಕ್ಷೇತ್ರದಲ್ಲಿಯೂ ಹಾಲಿ ಸಂಸದ ಪ್ರವೀಣ್ ಪಟೇಲ್ ಅವರಿಗೆ ಟಿಕೆಟ್ ಮಿಸ್ ಆಗಿದೆ. ಈ ಕ್ಷೇತ್ರದಲ್ಲಿ ಮಚ್ಲಿಸ್‌ಪುರದ ಹಾಲಿ ಸಂಸದ ಬಿಪಿ ಸರೋಜ್ ಅವರಿಗೆ ಟಿಕೆಟ್ ಸಿಕ್ಕಿದೆ. ಗಾಜಿಪುರದಲ್ಲಿ ಬಿಜೆಪಿ ಪರಾಸ್ ನಾಥ್ ರೈ ಅವರನ್ನು ಕಣಕ್ಕಿಳಿಸಿದ್ದು, ರೈ ಅವರು ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿರುವ ಮನೋಜ್ ಸಿನ್ಹಾ ಅವರ ಆಪ್ತರಾಗಿದ್ದಾರೆ. ಇಲ್ಲಿ ಸಮಾಜವಾದಿ ಪಕ್ಷದ ಅಫ್ಜಲ್ ಅನ್ಸಾರಿ ಇವರಿಗೆ ಸ್ಪರ್ಧೆ ನೀಡಲಿದ್ದಾರೆ.