ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟಿಗ ಮೊಹಮ್ಮದ್ ಶಮಿ ಗೆ ಮತ್ತೊಂದು ಸಂಕಷ್ಟ ಎದುರಾಗಿದ್ದು, ಕುಟುಂಬದ ಪ್ರಕರಣವೊಂದು ಶಮಿ ತಲೆಗೆ ಸುತ್ತಿಕೊಂಡಿದೆ.
ಉತ್ತರ ಪ್ರದೇಶದಲ್ಲಿ ನಡೆದ ನರೇಗ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮವಾಗಿ ಮೊಹಮ್ಮದ್ ಶಮಿ ತಂಗಿ ಕುಟುಂಬ ವೇತನ ಪಡೆದ ಆರೋಪ ಕೇಳಿಬಂದಿದೆ. ಶಮಿ ತಂಗಿ ಕುಟುಂಬ ಪ್ರತಿ ತಿಂಗಳು ನರೇಗ ಯೋಜನೆಯಡಿ ವೇತನ ಪಡೆದ ಆರೋಪ ಕೇಳಿಬಂದಿದೆ. ಈ ಕುರಿತು ದಾಖಲೆಗಳು ಹೊರಬಿದ್ದಿದೆ.
ಉತ್ತರ ಪ್ರದೇಶದಲ್ಲಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿದವರ ಪಟ್ಟಿಯಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಅವರ ಸಹೋದರಿಯೂ ಇದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಶಮಿ ಅವರ ಸಹೋದರಿ ಶಾಬಿನಾ ಮತ್ತು ಆಕೆಯ ಪತಿ ಹಾಗೂ ಅತ್ತೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಸರು ನೋಂದಾಯಿಸಿ ಕೆಲಸ ಮಾಡಿದಂತೆ ತೋರಿಸಿ ಹಣ ಪಡೆದಿದ್ದಾರೆ ಎಂದು ವರದಿ ಮಾಡಿದೆ.
2021-2024ರ ಅವಧಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಶಮಿ ತಂಗಿ ಹಾಗೂ ಆಕೆಯ ಪತಿ ಇಬ್ಬರ ಖಾತೆಗೂ ವೇತನದ ಹಣ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆರೋಪದ ಕುರಿತು ಶಮಿ ಅಥಾ ಶಮಿ ತಂಗಿ ಕುಟುಂಬ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮ್ರೋಹಾ ಜಿಲ್ಲೆಯ ಜೋಯಾ ಬ್ಲಾಕ್ನ ಪಲೋಲಾ ಗ್ರಾಮದಲ್ಲಿ ಶಮಿ ಸಹೋದರಿ ಶಾಬಿನಾ ಅವರ ಅತ್ತೆ ಗುಲೇ ಐಷಾ ಮುಖ್ಯಸ್ಥರಾಗಿದ್ದಾರೆ. ಹೀಗಾಗಿ ಅಧಿಕಾರ ಬಳಸಿ ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಉದ್ಯೋಗ ಖಾತ್ರಿ ಯೋಜನೆಯಡಿ ಒಟ್ಟು 657 ಉದ್ಯೋಗ ಚೀಟಿಗಳನ್ನು ಮಾಡಲಾಗಿದ್ದು, ಈ ಪಟ್ಟಿಯಲ್ಲಿ ಶಾಬಿನಾ 473ನೇ ಹೆಸರಿನವರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
2021ರಲ್ಲಿ ನೋಂದಣಿ ಮಾಡಿದ ನಂತರ ಶಾಬಿನಾ ಅವರ ಬ್ಯಾಂಕ್ ಖಾತೆಗೆ ಸುಮಾರು 70,000 ರೂಪಾಯಿ ಕೂಲಿಯಾಗಿ ಬಂದಿದೆ. ಹಾಗೆಯೇ ಶಾಬಿನಾ ಅವರ ಪತಿ ಗಸ್ನವಿ ಅವರ ಖಾತೆಗೆ ಸುಮಾರು 66,000 ರೂಪಾಯಿ ಕೂಲಿಯಾಗಿ ತಲುಪಿದೆ ಎಂದು ವರದಿಯಲ್ಲಿ ಹೇಳಲಾಗಿದೆ.