ಹೊಸದಿಗಂತ ಮಂಗಳೂರು :
ನಗರದ ಬಿಜೈ ಕಾಪಿಕಾಡ್ ಬಳಿಯ ದಡ್ಡಲ್ ಕಾಡು ಬಳಿ ಇಂದು ಬೆಳಗ್ಗೆ ಮತ್ತೊಂದು ದರೋಡೆ ಪ್ರಕರಣ ನಡೆದಿದ್ದು, ಬಂದರು ನಗರಿಯನ್ನು ಬೆಚ್ಚಿಬೀಳಿಸಿದೆ.
ಇಲ್ಲಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಈ ಸ್ಥಳದಲ್ಲಿ ಇಂದು ಮುಂಜಾನೆ ಸುಮಾರು 3.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವೃದ್ದರನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ದರೋಡೆಕೋರರು, ಬಳಿಕ ಮನೆ ಮಾಲಿಕ ಕಾರೊಂದಿಗೆ ಪರಾರಿಯಾಗಿದ್ದಾರೆ.
ಹಲ್ಲೆಯಿಂದ ಗಾಯಗೊಂಡಿರುವ ಮನೆ ಮಾಲಿಕರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತಂಡದಲ್ಲಿ 4 ಮಂದಿ ದರೋಡೆಕೋರು ಇದ್ದರೆಂದು ತಿಳಿದು ಬಂದಿದೆ.
ಈ ಮನೆಯಲ್ಲಿ ವೃದ್ದರೋರ್ವರು ವಾಸವಿದ್ದಾರೆ. ಅವರ ಮಕ್ಕಳು ವಿದೇಶದಲ್ಲಿದ್ದಾರೆ. ದರೋಡೆಕೋರರು ಮನೆಯವರಿಗೆ ಮಾರಕಾಯುಧ ತೋರಿಸಿ, ಹಲ್ಲೆ ನಡೆಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಪಡೆದು ಆ ಕಾರಿನಲ್ಲಿ ಉಡುಪಿಯತ್ತ ತೆರಳಿ ಹೆಜಮಾಡಿ ಟೋಲ್ ಗೇಟ್ ಸಮೀಪ ಕಾರು ನಿಲ್ಲಿಸಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಉರ್ವ ಪೊಲೀಸರು, ಹಿರಿಯ ಅಧಿಕಾರಿಗಳು, ಬೆರಳಚ್ಚು ತಜ್ಞರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆಹಚ್ಚಿ, ವಶಕ್ಕೆ ಪಡೆದುಕೊಂಡಿದ್ದಾರೆ. ದರೋಡೆಗೈದ ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಶೋಧ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.