June 1, 2026
Monday, June 1, 2026
spot_img

ಫೈನಲ್ ಸೋಲಿನ ಬೆನ್ನಲ್ಲೇ ಜಿಟಿ ತಂಡಕ್ಕೆ ಮತ್ತೊಂದು ಶಾಕ್: ಹೊತ್ತಿ ಉರಿದ ಬಸ್, ಆಟಗಾರರು ಸೇಫ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐಪಿಎಲ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೋತು ನಿರಾಸೆಯಲ್ಲಿದ್ದ ಗುಜರಾತ್ ಟೈಟಾನ್ಸ್ ತಂಡ, ಅದಾದ ಕೆಲವೇ ಗಂಟೆಗಳಲ್ಲಿ ಮತ್ತೊಂದು ಭೀಕರ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ಮುಗಿಸಿ ಆಟಗಾರರು ಹೋಟೆಲ್‌ಗೆ ಮರಳುತ್ತಿದ್ದಾಗ, ಅವರು ಪ್ರಯಾಣಿಸುತ್ತಿದ್ದ ತಂಡದ ಅಧಿಕೃತ ಬಸ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬಸ್‌ನಲ್ಲಿ ದಿಢೀರ್ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಆಟಗಾರರು ಆತಂಕಕ್ಕೆ ಒಳಗಾಗಿದ್ದರು. ಬಸ್‌ನಲ್ಲಿ ಹೊಗೆ ಮತ್ತು ಬೆಂಕಿ ಆವರಿಸಿದ್ದರಿಂದ ಸುಮಾರು ಒಂದು ಗಂಟೆಯ ಕಾಲ ಆಟಗಾರರು ಬಸ್‌ನ ಒಳಗೇ ಸಿಲುಕಿಕೊಳ್ಳಬೇಕಾಯಿತು.

ತಕ್ಷಣವೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳು, ಜಿಟಿ ತಂಡದ ಆಟಗಾರರನ್ನು ಸುರಕ್ಷಿತವಾಗಿ ಮತ್ತೊಂದು ಪರ್ಯಾಯ ಬಸ್‌ಗೆ ಸ್ಥಳಾಂತರಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಮತ್ತು ಎಲ್ಲಾ ಆಟಗಾರರು ಸುರಕ್ಷಿತವಾಗಿದ್ದಾರೆ ಎಂದು ವರದಿಗಳು ಖಚಿತಪಡಿಸಿವೆ.

ಪ್ಲೇಆಫ್ಸ್‌ನಿಂದಲೇ ಜಿಟಿ ತಂಡಕ್ಕೆ ಕಾಡಿದ್ದ ದುರಾದೃಷ್ಟ!

ಗುಜರಾತ್ ಟೈಟಾನ್ಸ್ ತಂಡಕ್ಕೆ ಪ್ಲೇಆಫ್ ಹಂತ ತಲುಪಿದಾಗಿನಿಂದಲೂ ಸಮಯ ಸರಿಯಿರಲಿಲ್ಲ. ಅತ್ಯಂತ ಬಿಡುವಿಲ್ಲದ ಹಾಗೂ ಒತ್ತಡದ ವೇಳಾಪಟ್ಟಿಯಿಂದಾಗಿ ಆಟಗಾರರು ಸುಸ್ತಾಗಿದ್ದರು. ಮೇ 27 ರಂದು ಆರ್‌ಸಿಬಿ ವಿರುದ್ಧ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಸೋತ ಜಿಟಿ, ಮೇ 29 ರಂದು ಎರಡನೇ ಕ್ವಾಲಿಫೈಯರ್ ಪಂದ್ಯವಾಡಲು ಮುಲ್ಲನ್‌ಪುರಕ್ಕೆ ಪ್ರಯಾಣ ಬೆಳೆಸಿತ್ತು. ಅಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಸೋಲಿಸಿ ಫೈನಲ್‌ಗೆ ಅರ್ಹತೆ ಪಡೆದುಕೊಂಡಿತು.

ಆದರೆ, ಫೈನಲ್ ಆಡಲು ಅಹಮದಾಬಾದ್‌ಗೆ ಮರಳಬೇಕಿದ್ದ ತಂಡಕ್ಕೆ ಪ್ರತಿಕೂಲ ವಾತಾವರಣ ಮತ್ತು ಕರಾವಳಿ ಹವಾಮಾನದ ವೈಪರೀತ್ಯ ಅಡ್ಡಿಯಾಗಿತ್ತು. ಹೀಗಾಗಿ ಮೇ 30ರ ತಡರಾತ್ರಿ 10 ಗಂಟೆ ಸುಮಾರಿಗೆಷ್ಟೇ ತಂಡ ಅಹಮದಾಬಾದ್ ತಲುಪಲು ಸಾಧ್ಯವಾಗಿತ್ತು. ಸತತ ಪ್ರಯಾಣ ಹಾಗೂ ದೊಡ್ಡ ಪಂದ್ಯಗಳ ಒತ್ತಡದಿಂದಾಗಿ ಜಿಟಿ ಆಟಗಾರರಿಗೆ ಸೂಕ್ತ ವಿಶ್ರಾಂತಿ ಮತ್ತು ಫೈನಲ್ ಪಂದ್ಯಕ್ಕೆ ಅಭ್ಯಾಸ ನಡೆಸಲು ಸರಿಯಾದ ಸಮಯ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಫೈನಲ್‌ನಲ್ಲಿ ಆರ್‌ಸಿಬಿ ಅಬ್ಬರ, ಚಾಂಪಿಯನ್ ಪಟ್ಟ!

ಭಾನುವಾರ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್, ನಿಗದಿತ 20 ಓವರ್‌ಗಳಲ್ಲಿ 155 ರನ್‌ಗಳ ಸಾಧಾರಣ ಮೊತ್ತ ಕಲೆಹಾಕಿತ್ತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡದ ಬ್ಯಾಟರ್‌ಗಳು ಅಬ್ಬರದ ಪ್ರದರ್ಶನ ನೀಡಿದರು. ಕೇವಲ 18 ಓವರ್‌ಗಳಲ್ಲೇ 161 ರನ್ ಬಾರಿಸುವ ಮೂಲಕ ಆರ್‌ಸಿಬಿ ಭರ್ಜರಿ ಜಯ ಸಾಧಿಸಿ, ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !