ಹೊಸದಿಗಂತ ಡಿಜಿಟಲ್ ಡೆಸ್ಕ್:
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಯನ್ನು ಕಲ್ಪಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಸಮೀಕ್ಷೆ ವೇಳೆ ಮನೆ ಮನೆಗೆ ಸ್ಟಿಕ್ಕರ್ ಅಂಟಿಸುವ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿದ್ದ ಮತ್ತೋರ್ವ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ವಸಂತನಗರ ಉಪವಿಭಾಗದಲ್ಲಿ ಕಂದಾಯ ಪರಿವೀಕ್ಷಕಿಯಾಗಿರುವ ಕವಿತಾ ಅವರನ್ನು ಅಮಾನತುಗೊಳಿಸಲಾಗಿದೆ.
ಕವಿತಾ ಅವರನ್ನು ಸರ್ವೆ ಸಮೀಕ್ಷೆ ಕಾರ್ಯಕ್ಕೆ ವಾರ್ಡಿನ ಮೇಲ್ವಿಚಾರಕರಾಗಿ ನಿಯೋಜಿಸಲಾಗಿತ್ತು. ವಾರ್ಡಿನ ವ್ಯಾಪ್ತಿಯಲ್ಲಿ ಈಗಾಗಲೇ ಸಮೀಕ್ಷೆ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮನೆಯ ಮಾಲೀಕರು, ನಿವಾಸಿಗಳನ್ನು ಸಂಪರ್ಕಿಸಿದಾಗ ತಮಿಳುನಾಡು ಹಾಗೂ ಇತರೆ ರಾಜ್ಯದ ಪರಿಶಿಷ್ಟ ಜಾತಿ ಎಂಬುದಾಗಿ ಮಾಹಿತಿ ನೀಡಿದ ಸಂದರ್ಭದಲ್ಲಿ ಅಂತಹ ಕುಟುಂಬಗಳನ್ನು ಹಳೆ ಆ್ಯಪ್ ನಲ್ಲಿ ನಾನ್ ಎಸ್‍ಸಿ ಹೌಸ್ ಹೋಲ್ಡ್ ಎಂದು ಪರಿಗಣಿಸಲಾಗಿದೆ.
ಆದರೆ ಹೊಸ ಆಪ್ ನಲ್ಲಿ ಗಣತಿದಾರರು ಅಂತಹ ಕುಟುಂಬಗಳನ್ನು ಕರ್ನಾಟಕ ರಾಜ್ಯದ ಪರಿಶಿಷ್ಟ ಜಾತಿ ಕುಟುಂಬಗಳೆಂದು ಪರಿಗಣಿಸಿ, ಹೊಸ ಆ್ಯಪ್ ನಲ್ಲಿ ಫೊಟೋ ತೆಗೆದು ಅಪ್ ಲೋಡ್ ಮಾಡಿ ಅನಾವಶ್ಯಕವಾಗಿ ಹಳೆ ಆ್ಯಪ್ ನಲ್ಲಿ ಸಮೀಕ್ಷೆ ಮಾಡಿರುವ ಕುಟುಂಬಗಳಿಗೂ ಹೊಸ ಆ್ಯಪ್ ನಲ್ಲಿ ಅಪ್‍ಲೋಡ್ ಮಾಡಿರುವ ಕುಟುಂಬಗಳಿಗೂ ಅಜಗಜಾಂತರ ವ್ಯತ್ಯಾಸ ಮಾಡಿದ್ದಾರೆ. ಹೀಗಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.