ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಮ್ಸ್ ಪ್ರಸ್ತುತಪಡಿಸಿದ ಅನಿಮೇಟೆಡ್ ಸಿನಿಮಾ ‘ಮಹಾವತಾರ್: ನರಸಿಂಹ’ ಕಳೆದ ಶುಕ್ರವಾರ, ಜುಲೈ 25ರಂದು ತೆರೆಕಂಡಿದ್ದು, ಬಿಡುಗಡೆಯ ಐದು ದಿನಗಳಲ್ಲೇ 30 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿ ಗಮನ ಸೆಳೆದಿದೆ.
ಅಂದೇ ಬಿಡುಗಡೆ ಆಗಿದ್ದ ‘ಸು ಫ್ರಂ ಸೋ’ ಚಿತ್ರದ ಬೃಹತ್ ಪ್ರಚಾರದ ಮಧ್ಯೆಯೂ, ‘ಮಹಾವತಾರ್: ನರಸಿಂಹ’ ಸಿನಿಮಾ ತನ್ನದೇ ಆದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಬಿಡುಗಡೆದಿನದಿಂದ ನಿನ್ನೆರವರೆಗೆ ಸಿನಿಮಾ 26.43 ಕೋಟಿ ರೂಪಾಯಿ ಗಳಿಸಿದ್ದರೆ, ಇಂದಿನದೊಂದಿಗೆ ಮತ್ತಷ್ಟು 3 ಕೋಟಿ ರೂಪಾಯಿ ಸೇರಿಕೊಂಡು, ಒಟ್ಟು 30 ಕೋಟಿ ರೂಪಾಯಿ ಗಳಿಕೆ ತಲುಪಿದೆ. ಇದು ಯಾವುದೇ ದೊಡ್ಡ ಸ್ಟಾರ್‌ಗಳು ಇಲ್ಲದ ಹಾಗೆ, ಅಧಿಕ ಜಾಹೀರಾತು ಇಲ್ಲದಿರುವ ಅನಿಮೇಶನ್ ಚಿತ್ರವೊಂದಕ್ಕೆ ದೊಡ್ಡ ಸಾಧನೆ ಎನ್ನಬಹುದು.
ಈ ಚಿತ್ರವೊಂದು ಭಗವಾನ್ ವಿಷ್ಣುವಿನ ನರಸಿಂಹ ಅವತಾರದ ಕುರಿತಾದ ಕಥೆಯನ್ನು ಆಧರಿಸಿ ಅನಿಮೇಶನ್ ಮೂಲಕ ಪ್ರಸ್ತುತಪಡಿಸುತ್ತಿದೆ. ನಿರ್ದೇಶಕ ಅಶ್ವಿಕ್ ಕುಮಾರ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಶಿಲ್ಪಾ ಧವನ್, ಕುಶಾಲ್ ದೇಸಾಯಿ, ಚೈತನ್ಯ ದೇಸಾಯಿ ಅವರು ಚಿತ್ರ ನಿರ್ಮಾಣ ಮಾಡಿದ್ದಾರೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಇದು, ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿದೆ.
ಹೊಂಬಾಳೆ ಫಿಲಮ್ಸ್ ಈ ಚಿತ್ರವನ್ನು ಮಾತ್ರವಲ್ಲ, ಮುಂದಿನ ಹತ್ತು ವರ್ಷಗಳಲ್ಲಿಯೂ “ಮಹಾವತಾರ್” ಶ್ರೇಣಿಯ ಏಳು ಚಿತ್ರಗಳನ್ನು ಬಿಡುಗಡೆ ಮಾಡುವ ಯೋಜನೆಯನ್ನೂ ಹೊಂದಿದೆ. ಈ ಚಿತ್ರಮಾಲಿಕೆಯಲ್ಲಿ “ಮಹಾವತಾರ್ ನರಸಿಂಹ” (2025) ನಂತರ, “ಮಹಾವತಾರ್ ಪರಶುರಾಮ” (2027), “ಮಹಾವತಾರ್ ರಘುನಂದನ” (2029), “ಮಹಾವತಾರ್ ಧ್ವಾಕಾಧೀಶ್” (2031), “ಮಹಾವತಾರ್ ಗೋಕುಲನಂದ” (2033), “ಮಹಾವತಾರ್ ಕಲ್ಕಿ ಭಾಗ 1” (2035), “ಮಹಾವತಾರ್ ಕಲ್ಕಿ ಭಾಗ 2” (2037) ಸೇರಿದಂತೆ ಒಟ್ಟು ಏಳು ಚಿತ್ರಗಳನ್ನು ಬಿಡುಗಡೆ ಮಾಡುವ ಮಹತ್ವಾಕಾಂಕ್ಷೆಯ ಯೋಜನೆ ರೂಪಿಸಲಾಗಿದೆ.
ಒಟ್ಟು 30 ಕೋಟಿ ಕಲೆಕ್ಷನ್ ದಾಖಲಿಸಿರುವ ‘ಮಹಾವತಾರ್: ನರಸಿಂಹ’ ಈಗಾಗಲೇ ಆಧ್ಯಾತ್ಮಿಕ ಚಿತ್ರಗಳಲ್ಲಿ ಹೊಸ ಮಾನದಂಡ ಸ್ಥಾಪಿಸಿದೆ. ಭವಿಷ್ಯದಲ್ಲಿ ಈ ಸಿನಿಮಾವ್ಯಾಪ್ತಿಯು ಮತ್ತಷ್ಟು ವಿಸ್ತರಿಸಿಕೊಳ್ಳುವ ಸಾಧ್ಯತೆ ಇದ್ದು, ಅನಿಮೇಶನ್ ಕ್ಷೇತ್ರದಲ್ಲೂ ಕನ್ನಡ ಚಿತ್ರರಂಗದ ಸ್ಥಾನ ಮತ್ತಷ್ಟು ಬಲವಾಗುತ್ತಿದೆ.