Friday, January 9, 2026

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಮತ್ತೊಂದು ಸಂಕಷ್ಟ: ಕೋರ್ಟ್ ನಿಂದ ಸಮನ್ಸ್ ಜಾರಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ ಆರೋಪದ ಬಳಿಕ ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಅವರಿಗೆ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಈ ಕುರಿತು ಜಾರಿ ನಿರ್ದೇಶನಾಲಯವು ಕಳೆದ ಸೆಪ್ಟೆಂಬರ್‌ನಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಇದರ ವಿಚಾರಣೆಗಾಗಿ ಇದೀಗ ಸಮನ್ಸ್ ಜಾರಿ ಮಾಡಲಾಗಿದೆ.

ಜಾರಿ ನಿರ್ದೇಶನಾಲಯ ದಾಖಲಿಸಿರುವ ಆರೋಪಪಟ್ಟಿಯಲ್ಲಿ ರಾಜ್ ಕುಂದ್ರಾ ಮತ್ತು ದುಬೈ ಮೂಲದ ಉದ್ಯಮಿ ರಾಜೇಶ್ ಸತಿಜಾ ಅವರನ್ನು ಆರೋಪಿಗಳಾಗಿ ಹೆಸರಿಸಲಾಗಿದೆ. ಇಬ್ಬರಿಗೂ ಜನವರಿ 19 ರಂದು ನ್ಯಾಯಾಲಯದ ಮುಂದೆ ಹಾಜರಾಗಲು ಸೂಚಿಸಲಾಗಿದೆ.

ದೂರಿನಲ್ಲಿ ಏನಿದೆ?

ತನಿಖಾ ಸಂಸ್ಥೆ ನೀಡಿರುವ ದೂರಿನ ಪ್ರಕಾರ, ಉಕ್ರೇನ್‌ನಲ್ಲಿ ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಸ್ಥಾಪಿಸಲು ಕುಂದ್ರಾ ಅವರು ಗೇನ್ ಬಿಟ್‌ಕಾಯಿನ್ ಪೊಂಜಿ ಹಗರಣದ ಮಾಸ್ಟರ್ ಮೈಂಡ್ ಅಮಿತ್ ಭಾರದ್ವಾಜ್ ನಿಂದ 285 ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆ ಎಂದು ಉಲ್ಲೇಖಿಸಲಾಗಿದೆ.

ಬಿಟ್‌ಕಾಯಿನ್ ಗಣಿಗಾರಿಕೆ ಫಾರ್ಮ್ ಎಂಬುದು ಸಾಮಾನ್ಯ ಭಾಷೆಯಲ್ಲಿ ಇದನ್ನು ಗೋದಾಮು ಎಂದು ಕರೆಯಬಹುದು. ಬಿಟ್‌ಕಾಯಿನ್ ವಹಿವಾಟುಗಳನ್ನು ನಡೆಸಲು, ತಮ್ಮ ನೆಟ್‌ವರ್ಕ್ ಅನ್ನು ಸುರಕ್ಷಿತಗೊಳಿಸಲು, ಹೊಸ ಬಿಟ್‌ಕಾಯಿನ್‌ಗಳ ಪ್ರತಿಫಲಗಳನ್ನು ಪಡೆಯಲು ಬಳಸುವ ವಿಶೇಷ ಕಂಪ್ಯೂಟರ್‌ ಸೌಲಭ್ಯಗಳನ್ನು ಇದು ಹೊಂದಿರುತ್ತದೆ.

ರಾಜ್ ಕುಂದ್ರಾ ಅವರು ಅಮಿತ್ ಭಾರದ್ವಾಜ್ ಬಳಿ ಮಾಡಿದ ಒಪ್ಪಂದ ಕಾರ್ಯರೂಪಕ್ಕೆ ಬಂದಿರಲಿಲ್ಲ. ಹೀಗಾಗಿ ಕುಂದ್ರಾ ಬಳಿ ಪ್ರಸ್ತುತ 150 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ 285 ಬಿಟ್‌ಕಾಯಿನ್‌ಗಳಿವೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ.

ಈ ವ್ಯವಹಾರದಲ್ಲಿ ರಾಜ್ ಕುಂದ್ರಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಅವರು ಒದಗಿಸಿಲ್ಲ. ಟರ್ಮ್ ಶೀಟ್ ಎನ್ನುವ ಒಪ್ಪಂದಕ್ಕೆ ಅವರು ಸಹಿ ಹಾಕಿದ್ದು, ಇದರಲ್ಲಿ ಮಹೇಂದ್ರ ಭಾರದ್ವಾಜ್ ಎಂಬವರ ಸಹಿ ಕೂಡ ಇದೆ. ಮಹೇಂದ್ರ ಭಾರದ್ವಾಜ್ ಅವರು ಅಮಿತ್ ಭಾರದ್ವಾಜ್ ಅವರ ತಂದೆ. ಒಪ್ಪಂದ ವಾಸ್ತವವಾಗಿ ರಾಜ್ ಕುಂದ್ರಾ ಮತ್ತು ಅಮಿತ್ ಭಾರದ್ವಾಜ್ ನಡುವೆ ನಡೆದಿದ್ದರೂ ಇಲ್ಲಿ ಮಹೇಂದ್ರ ಭಾರದ್ವಾಜ್ ಸಹಿ ಏಕೆ ಹಾಕಿದ್ದಾರೆ ಎನ್ನುವ ಪ್ರಶ್ನೆಗೂ ಕುಂದ್ರಾ ಸರಿಯಾಗಿ ಹೇಳಿಕೆ ನೀಡಿಲ್ಲ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜ್ ಕುಂದ್ರಾ ಮತ್ತು ಅಮಿತ್ ಭಾರದ್ವಾಜ್ ನಡುವೆ ಸುಮಾರು ಏಳು ವರ್ಷಗಳಿಗೂ ಹೆಚ್ಚು ಕಾಲ ವಹಿವಾಟು ನಡೆದಿದೆ. ತಾವು ಐದು ನಿರ್ದಿಷ್ಟ ಕಂತುಗಳಲ್ಲಿ ಬಿಟ್‌ಕಾಯಿನ್‌ ಪಡೆದಿರುವುದಾಗಿ ನಿಖರವಾದ ಸಂಖ್ಯೆಯನ್ನು ಕುಂದ್ರಾ ಹೇಳಿದ್ದಾರೆ. ಅವರು ಮಾಲೀಕರಾಗಿ ಬಿಟ್‌ಕಾಯಿನ್‌ಗಳನ್ನು ಪಡೆದಿದ್ದಾರೆಯೇ ಅಥವಾ ಕೇವಲ ಮಧ್ಯವರ್ತಿಯಾಗಿ ಸ್ವೀಕರಿಸಿದ್ದಾರೆಯೇ ಎನ್ನುವ ಕುರಿತು ಕೂಡ ವಿಚಾರಣೆಯಾಗಬೇಕಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

error: Content is protected !!