ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಮಡಿವಾಳದ ಪೊಲೀಸ್ ಠಾಣೆ ಮುಂಭಾಗದಲ್ಲೇ ನಡೆದುಕೊಂಡು ಬರ್ತಿದ್ದ ವೃದ್ಧನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ವೃದ್ಧನ ತಲೆ ಮೇಲೆ ಮೇಲೆಯೇ ಬಸ್ ಹರಿದಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಮಡಿವಾಳದಲ್ಲಿ ನಡೆದುಕೊಂಡು ಬರ್ತಿದ್ದ ವೃದ್ಧನಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದ್ದು, ಹಿರಿಜೀವ ಸ್ಥಳದಲ್ಲೇ ಉಸಿರು ಚೆಲ್ಲಿದೆ. ವೃದ್ಧನ ತಲೆ ಮೇಲೆಯೇ ಬಸ್ ಚಕ್ರಗಳು ಹರಿದಿದ್ದು, ತಲೆ ನಜ್ಜುಗುಜ್ಜಾಗಿದೆ. ಈ ಅಪಘಾತ ಕಂಡು ಜನರು ಆಘಾತಗೊಂಡಿದ್ದಾರೆ.
ಮಡಿವಾಳ ನಿವಾಸಿ ವೆಂಕಟರಾಮಯ್ಯ ಮೃತ ದುರ್ದೈವಿ ಆಗಿದ್ದಾರೆ. ಮಡಿವಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಜನರು ಅಕ್ರೋಶ ಹೊರಹಾಕಿದ್ದಾರೆ.

