ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಬೀದಿ ನಾಯಿಗಳ ದಾಳಿಗೆ ಮತ್ತೊಂದು ಬಲಿಯಾಗಿದೆ. ಬೀದಿ ನಾಯಿಗಳ ದಾಳಿಗೊಳಗಾಗಿ ರೇಬಿಸ್ ಕಾಯಿಲೆಯಿಂದ ಕಳೆದ 4 ತಿಂಗಳಿನಿಂದ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ 4 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ದಾವಣಗೆರೆ ನಗರದ ಶಾಸ್ತ್ರಿ ಲೇಔಟ್‌ನ ನಿವಾಸಿ ಮೊಹಮ್ಮದ್ ಶಾಕೀರ್ ಆಲಿ, ಅತೀಹಾ ಖಾನಂ ದಂಪತಿಯ ಮಗಳು ಖದೀರಾ ಬಾನು (4) ಮೃತ ಬಾಲಕಿ.
ಏಪ್ರಿಲ್ 27 ರಂದು ಮನೆಯ ಹೊರಗೆ ಆಟವಾಡುತ್ತಿದ್ದಾಗ ಬಾಲಕಿ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ, ಗಂಭೀರವಾಗಿ ಗಾಯಗೊಳಿಸಿದ್ದವು. ಕೂಡಲೇ ಪೋಷಕರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಯನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಕೊಡಿಸಿ ಮನೆಗೆ ಕರೆತಂದಿದ್ದರು. ಆದರೆ ಒಂದು ತಿಂಗಳ ಹಿಂದೆ ಬಾಲಕಿ ವಾಂತಿ ಮಾಡಿಕೊಂಡು ಅಸ್ವಸ್ಥಳಾಗಿದ್ದಳು.
ಗಾಬರಿಗೊಂಡ ಪೋಷಕರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲು ಮಾಡಿದ್ದು, ತಪಾಸಣೆ ನಡೆಸಿದ ವೈದ್ಯರು ಮಗುವಿಗೆ ರೇಬಿಸ್ ತಗಲಿರುವುದನ್ನು ಪತ್ತೆ ಮಾಡಿದ್ದರು. ಕೂಡಲೇ ಐಸಿಯುನಲ್ಲಿರಿಸಿ ಚಿಕಿತ್ಸೆ ಆರಂಭಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಭಾನುವಾರ ಮೃತಪಟ್ಟಿದ್ದಾಳೆ.