ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಡುಪಿಯ ಕೋಡಿಬೇಂಗ್ರೆಯಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಯುವತಿ ಮಂಗಳವಾರ ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಮೃತರ ಸಂಖ್ಯೆ ಮೂರಕ್ಕೇರಿದೆ. ಮೃತರನ್ನು ಮೈಸೂರಿನ ದಿಶಾ (೨೬) ಎಂದು ಗುರುತಿಸಲಾಗಿದೆ.
ಸೋಮವಾರ ನಡೆದ ದುರಂತದಲ್ಲಿ ಚಾಮರಾಜನಗರದ ಜಿಲ್ಲೆಯ ಹರವೆ ಗ್ರಾಮದ ಶಂಕರಪ್ಪ (೨೭) ಹಾಗೂ ಚಾಮರಾಜನಗರ ಜಿಲ್ಲೆಯ ನರಸೀಪುರ ತಾಲೂಕಿನ ಮೂಗೂರು ನಿವಾಸಿ ಸಿಂಧು (೨೫) ಮೃತಪಟ್ಟಿದ್ದರು.
ತೀವ್ರವಾಗಿ ಅಸ್ವಸ್ಥಗೊಂಡು ಮಣಿಪಾಲ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಧರ್ಮರಾಜ (೨೬) ಚಿಕಿತ್ಸೆ ಸ್ಪಂದಿಸುತ್ತಿದ್ದಾರೆ. ಇವರೆಲ್ಲ ಮೈಸೂರು ಗೋಲ್ ಕ್ರಿಸ್ಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದಾರೆ.
ಮೈಸೂರಿನಿಂದ ಒಟ್ಟು ೧೪ ಮಂದಿ ಜತೆಯಾಗಿ ಉಡುಪಿಗೆ ಪ್ರವಾಸಕ್ಕೆ ಬಂದಿದ್ದರು. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕೋಡಿಬೆಂಗ್ರೆಯ ಡೆಲ್ಟಾ ಬೀಚ್‌ನಿಂದ ಪ್ರವಾಸಿ ದೋಣಿಯಲ್ಲಿ ಸಮುದ್ರಕ್ಕೆ ವಿಹಾರಕ್ಕೆ ಹೋಗಿದ್ದರು. ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಹಂಗಾರಕಟ್ಟೆ ಶಿಪ್ ಬಿಲ್ಡಿಂಗ್ ಪ್ರದೇಶದ ಸಮೀಪ ನದಿ-ಸಮುದ್ರ ಸೇರುವ ಸ್ಥಳದಲ್ಲಿ ದೋಣಿ ಆಕಸ್ಮಿಕವಾಗಿ ಪಲ್ಟಿಯಾಗಿದೆ. ದೋಣಿ ಅವಘಡದಿಂದ ದೋಣಿಯಲ್ಲಿದ್ದ ೧೪ ಮಂದಿಯೂ ನೀರಿಗೆ ಬಿದ್ದಿದ್ದು, ನೀರು ಕುಡಿದು ಅಸ್ವಸ್ಥಗೊಂಡಿದ್ದರು. ಈ ಪೈಕಿ ಕೆಲವರಷ್ಟೇ ಲೈಫ್‌ಜಾಕೆಟ್ ಧರಿಸಿದ್ದರು. ದೋಣಿ ಪಲ್ಟಿಯಾಗಿ ಪ್ರವಾಸಿಗರು ನೀರಿಗೆ ಬೀಳುತ್ತಿದ್ದಂತೆ ಅಲ್ಲಿಂದ ಇತರೆ ದೋಣಿಯವರು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದರು.
ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



