ʼದಿ ಕಾಶ್ಮೀರ್‌ ಫೈಲ್ಸ್‌ʼ ಬಗೆಗಿನ ಹೇಳಿಕೆ ಕೀಳುಮಟ್ಟದ್ದುʼ: ಭಾರತದ ಕ್ಷಮೆಯಾಚಿಸಿದ ಇಸ್ರೇಲ್ ರಾಯಭಾರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗೋವಾದಲ್ಲಿ ನಡೆಯುತ್ತಿರುವ 53ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (ಐಎಫ್‌ಎಫ್‌ಐ) ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ʼತಪ್ಪು ಪ್ರಚಾರದʼ ಮತ್ತು ʼಅಶ್ಲೀಲ ಚಲನಚಿತ್ರʼ ಎಂದು ಕರೆದಿದ್ದ ತನ್ನ ದೇಶದ ಚಲನಚಿತ್ರ ನಿರ್ಮಾಪಕನನ್ನು ಭಾರತದ ಇಸ್ರೇಲ್ ರಾಯಭಾರಿ ಕಟು ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಉತ್ಸವದ ತೀರ್ಪುಗಾರರ ತಂಡದ ನೇತೃತ್ವ ವಹಿಸಿದ್ದ ಇಸ್ರೇಲಿ ಚಲನಚಿತ್ರ ನಿರ್ಮಾಪಕ ನಾದವ್ ಲ್ಯಾಪಿಡ್ ಅವರು ನಿನ್ನೆ ನಡೆದಿದ್ದ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಾಶ್ಮೀರಿ ಫೈಲ್ಸ್‌ ಬಗ್ಗೆ ಟೀಕೆಗಳನ್ನು ಮಾಡಿದ್ದರು.
ಈ ಬಗ್ಗೆ ಇಂದು ಇಸ್ರೇಲ್‌ ನ ರಾಯಭಾರಿ ನೌರ್ ಗಿಲೋನ್ ಅವರು ಟ್ವಿಟರ್‌ನಲ್ಲಿ ʼಸಾರ್ವಜನಿಕ ಪತ್ರʼ ಬರೆದಿದ್ದು, ಈ ಮೂಲಕ ಭಾರತೀಯರ ಕ್ಷಮೆಯಾಚಿಸಿದ್ದಾರೆ.
‌ʼಕಾಶ್ಮೀರ್ ಫೈಲ್ಸ್‌ʼ ಬಗ್ಗೆ ಟೀಕೆ ಮಾಡಿದ ಸಾದವ್‌ ಲ್ಯಾಪಿಡ್‌ ಅವರಿಗೆ ಇದು ಬಹಿರಂಗ ಪತ್ರ. ಇದನ್ನು ನಮ್ಮ ಭಾರತೀಯ ಸಹೋದರ- ಸಹೋದರಿಯರು ಅರ್ಥಮಾಡಿಕೊಳ್ಳಬೇಕೆಂದು ಸಾರ್ವತ್ರಿಕ ಭಾಷೆಯಲ್ಲಿ ಬರೆಯುತ್ತಿದ್ದೇನೆ. ಚಲನ ಚಿತ್ರಗಳ ನ್ಯಾಯಾಧೀಶರ ಸಮಿತಿಗೆ ನಿಮ್ಮನ್ನು ಅಧ್ಯಕ್ಷರನ್ನಾಗಿ ಭಾರತೀಯರು ನೀಡಿದ್ದ ಅವಕಾಶವನ್ನು ಕೆಟ್ಟ ರೀತಿಯಲ್ಲಿ ದುರುಪಯೋಗ ಪಡಿಸಿಕೊಂಡಿಕೊಂಡಿದ್ದಕ್ಕೆ ಲ್ಯಾಪಿಡ್ ಅವರೇ ನೀವು ನಾಚಿಕೆ ಪಡಬೇಕುʼ ಎಂದು ಗಿಲೋನ್ ವಾಗ್ದಾಳಿ ನಡೆಸಿದ್ದಾರೆ.
“ಭಾರತೀಯ ಸಂಸ್ಕೃತಿಯಲ್ಲಿ ಅತಿಥಿಯನ್ನು ದೇವರಂತೆ ಕಾಣುತ್ತಾರೆ. ಐಐಎಫ್‌ಐ ನ್ಯಾಯಾಧೀಶರ ಸಮಿತಿಯ ಅಧ್ಯಕ್ಷರಾಗಲು ಭಾರತೀಯರು ನೀಡಿದ್ದ ಆಹ್ವಾನವನ್ನು ಮತ್ತು ಅವರು ನಿಮ್ಮಲ್ಲಿಟ್ಟ ನಂಬಿಕೆ, ಗೌರವ ಮತ್ತು ಆತ್ಮೀಯ ಆತಿಥ್ಯವನ್ನು ನೀವು ಅತ್ಯಂತ ಕೆಟ್ಟ ರೀತಿಯಲ್ಲಿ ನಿಂದಿಸಿದ್ದೀರಿ. ” ಎಂದು ಇಸ್ರೇಲಿ ರಾಯಭಾರಿ ಹೇಳಿದ್ದಾರೆ.
‘ಫೌಡಾ’ ಟಿವಿ ಸರಣಿ ಸೇರಿದಂತೆ ಬಹಳಷ್ಟು ಇಸ್ರೇಲಿ ಕಾರ್ಯಕ್ರಮಗಳನ್ನು ಭಾರತೀಯರು ಇಷ್ಟಪಡುತ್ತಾರೆ. ಅವರು ನಮ್ಮ ಮೇಲೆ ತೋರುತ್ತಿರುವ ಆಧರಕ್ಕೆ ನಾವೆಲ್ಲರು ವಿನಮ್ರವಾಗಿರಬೇಕು.  ಐತಿಹಾಸಿಕ ಘಟನೆಗಳನ್ನು ಆಳವಾಗಿ ಅಧ್ಯಯನ ಮಾಡುವ ಮೊದಲು ಅದರ ಬಗ್ಗೆ ಮಾತನಾಡುವುದು ಸಂವೇದನಾಶೀಲತೆಯಲ್ಲ, ಅದು ದುರಹಂಕಾರ. ಕಾಶ್ಮೀರದ ಹಿಂಸಾಚಾರ ಭಾರತೀಯರ ಹೃದಯಕ್ಕಾದ ಗಾಯವಾಗಿದೆ. ಕಾಶ್ಮೀರ್‌ ಫೈಲ್ಸ್ ಕಾಶ್ಮೀರ ಸಮಸ್ಯೆಯ ಸೂಕ್ಷ್ಮತೆಯನ್ನು ತೋರಿಸುತ್ತದೆ” “ಆ ಚಿತ್ರದ ಕುರಿತಾದ ಅಸಂಬದ್ಧ ಹೇಳಿಕೆಗಳನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ಈ ಬಗ್ಗೆ ಯಾವುದೇ ಸಮರ್ಥನೆ ಇಲ್ಲ. ಮಹತ್ವದ ಸ್ಥಾನದಲ್ಲಿದ್ದಾಗ ಮಾತೂ ಸಹ ತೂಕದ್ದಾಗಿರಬೇಕು ಎಂದು ಅವರು ಹೇಳಿದ್ದಾರೆ.
ಭಾರತ-ಇಸ್ರೇಲ್ ಬಾಂಧವ್ಯಗಳು ತುಂಬಾ ದೃಢವಾಗಿದ್ದು, ನಾದವ್ ಅವರ ಹೇಳಿಕೆ ಅದಕ್ಕೇನು ಹಾನಿ ಮಾಡಲಾರದು ಎಂದು ಗಿಲೋನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇಸ್ರೇಲಿಗನಾಗಿ ನಾನು ಈ ಹೇಳಿಕೆಗೆ ನಾಚಿಕೆಪಡುತ್ತೇನೆ ಮತ್ತು ನಮ್ಮ ಆತಿಥೇಯರ ಉದಾರತೆ ಮತ್ತು ಸ್ನೇಹಕ್ಕಾಗಿ ನಾವು ಮರುಪಾವತಿ ಮಾಡಿದ ಕೆಟ್ಟ ವಿಧಾನಕ್ಕಾಗಿ ಭಾರತೀಯರ ಕ್ಷಮೆಯಾಚಿಸಲು ಬಯಸುತ್ತೇನೆ” ಎಂದು ರಾಯಭಾರಿ ಗಿಲಾನ್‌ ವಿನಮ್ರವಾಗಿ ನುಡಿದಿದ್ದಾರೆ.
‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ನೋಡಿ ಚಲನಚಿತ್ರೋತ್ಸವದಲ್ಲಿ ತೀರ್ಪುಗಾರರು “ವಿಚಲಿತರಾಗಿದ್ದಾರೆ ಮತ್ತು ಆಘಾತಕ್ಕೊಳಗಾಗಿದ್ದಾರೆ” ಎಂದು ನಾಡವ್ ಲ್ಯಾಪಿಡ್ ನಿನ್ನೆ ಹೇಳಿದ್ದರು. “ಇದು ನಮಗೆ ತಪ್ಪು ಸಂದೇಶದ, ಅಸಭ್ಯ ಚಲನಚಿತ್ರದಂತೆ ಭಾಸವಾಯಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ ಸ್ಪರ್ಧಾತ್ಮಕ ವಿಭಾಗಕ್ಕೆ ಈ ಚಿತ್ರ ಸೂಕ್ತವಾದುದಲ್ಲ, ಇದೊಂದು ಕೆಟ್ಟ ಚಿತ್ರʼ ಎಂದು ನಾದವ್‌ ಹೇಳಿದ್ದರು. ಈ ಹೇಳಿಕೆಗೆ ಭಾರಿ ಟೀಕೆ  ವ್ಯಕ್ತವಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!