ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿಗೆ ಪ್ರತಿನಿತ್ಯ 10,000 ಕಿಸೆಕ್ಸ್ ನಂತೆ 15 ದಿನಗಳ ಕಾಲ ನೀರು ಹರಿಸುವ ನಿರ್ಧಾರ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೃಷ್ಣ ಕಚೇರಿ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ನಮ್ಮಲ್ಲಿ ಮಳೆ ಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ.ಆದರೂ ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಆದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆನಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.
ಕುಮಾರಸ್ವಾಮಿಯವರು ಸರ್ವಪಕ್ಷ ಸಭೆ ಕರೆಯುವ ಬಗ್ಗೆ ಪ್ರಶ್ನಿಸಿದಾಗ, ಕುಮಾರಸ್ವಾಮಿ ಅವರು ಸರ್ವ ಪಕ್ಷ ಸಭೆ ಕರೆಯುವ ಬಗ್ಗೆ ಕೇಳಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಸರ್ವ ಪಕ್ಷಗಳ ಜೊತೆ ಚರ್ಚೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಕೂಡ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ಆಲೋಚನೆ ಮಾಡಿದ್ದೇವೆ. ಬೊಮ್ಮಾಯಿಯವರು ಕೂಡ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿಂದೆ ಅವರ ಸರ್ಕಾರ ಇದ್ದಾಗಲೂ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ನೀರು ಬಿಡಲಾಗಿತ್ತು, ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನೀರು ಬಿಡಲಾಗಿತ್ತು. ಈ ಬಗ್ಗೆ ದಾಖಲೆಗಳಿವೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಮ್ಮ ಪರಿಸ್ಥಿತಿ ಹದಗೆಟ್ಟಿದ್ದು ತಮಿಳುನಾಡಿನವರು ತಮ್ಮ ಆಗ್ರಹ ಮುಂದುವರಿಸಿದ್ದಾರೆ ಎಂದು ತಿಳಿಸಿದರು.