ಹೊಸದಿಗಂತ ವರದಿ, ಶಿರಸಿ:
ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸಮಿತಿ ವತಿಯಿಂದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಗುರುವಾರ ಮನವಿ ಸಲ್ಲಿಸಿ ಮಹತ್ವಾಕಾಂಕ್ಷಿ ಯೋಜನೆಗಳಾದ ಹುಬ್ಬಳ್ಳಿ- ಅಂಕೋಲಾ, ತಾಳಗುಪ್ಪ- ಹೊನ್ನಾವರ ಮತ್ತು ಮಾದನಗೇರಿ ಅಂಡರಪಾಸ್ ಯೋಜನೆ ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಸರ್ಕಾರದ ಜೊತೆ ಪ್ರಯತ್ನ ನಡೆಸಲು ಮನವಿ ಮಾಡಲಾಯಿತು.
ಸೇವಾ ಸಮಿತಿಯ ಕಾರ್ಯದರ್ಶಿ ರಾಜೀವ ಗಾಂವಕಾರ್ ಮಾತನಾಡಿ, ಅಂದಿನ ಪ್ರಧಾನಿ ವಾಜಪೇಯಿ ಯವರ ಕನಸಿನ ಕೂಸಾದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ಅನುಷ್ಠಾನಕ್ಕೆ ಇರುವ ಎಲ್ಲ ತೊಡಕುಗಳು ನಿವಾರಣೆ ಆಗಿದ್ದು, ಕೇಂದ್ರ ಸರ್ಕಾರ ತುರ್ತು ಆಸಕ್ತಿ ತಳೆಯಬೇಕಿದೆ. ಅದೇ ರೀತಿ ತಾಳಗುಪ್ಪ- ಹೊನ್ನಾವರ ಮತ್ತು ಮಾದನಗೇರಿ ಅಂಡರಪಾಸ್ ಯೋಜನೆ ಸಹ ತ್ವರಿತ ಅನುಷ್ಠಾನವಾಗಬೇಕಿದ್ದು,ಸಂಸದರಾದ ತಮ್ಮ ಸಹಕಾರ, ಪ್ರಯತ್ನ ಅತ್ಯಗತ್ಯ ಎಂದರು.
ಸೇವಾ ಸಮಿತಿಯ ಗೌರವಾಧ್ಯಕ್ಷ ಮಂಗಲದಾಸ ಕಾಮತ್ ಮಾತನಾಡಿ, ಅಲಗೇರಿಯಲ್ಲಿ ವಿಮಾನ ನಿಲ್ದಾಣ ಬರುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಸಮಗ್ರ ವಿಕಾಸಕ್ಕೆ ಈ ಎರಡೂ ರೈಲು ಯೋಜನೆಗಳ ಅನುಷ್ಠಾನ ತೀಆ ಅಗತ್ಯ ಎಂದು ಪ್ರತಿಪಾದಿಸಿದರು.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲೆಯ ಪ್ರಮುಖ ಈ ರೈಲು ಯೋಜನೆಗಳ ಅನುಷ್ಠಾನಕ್ಕೆ ಸಚಿವ ಪ್ರಲ್ಹಾದ ಜೋಶಿ, ಸಂಸದ ಜಗದೀಶ ಶೆಟ್ಟರ್ ಮತ್ತಿತರರ ಸಹಕಾರ ಪಡೆದು ಸಂಪೂರ್ಣ ಪ್ರಯತ್ನ ನಡೆಸುತ್ತೇನೆ. ರೈಲ್ವೇ ಸಹಾಯಕಸಚಿವರಾಗಿ ನಮ್ಮವರೇಆದ ಸೋಮಣ್ಣ ಇರುವುದರಿಂದ ನಮಗೆ ಇನ್ನಷ್ಟು ಬಲ ಬಂದಂತಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರೈಲ್ವೆ ಸಮಿತಿ ವತಿಯಿಂದ ಸಂಸದ ಕಾಗೇರಿ ಅವರನ್ನು ಸನ್ಮಾನಿಸಲಾಯಿತು. ಸಮಿತಿಯ ಅಧ್ಯಕ್ಷ ಜಾರ್ಜ್ ಫರ್ನಾಂಡೀಸ್, ಉಪಾಧ್ಯಕ್ಷ ವೆಂಟು ಮಾಸ್ತರ್ ಶೀಳ್ಯ , ಸದಸ್ಯರುಗಳಾದ ವಸಂತ ನಾಯಕ ಭಾವಿಕೇರಿ, ಚಂದ್ರಹಾಸ ನಾಯಕ ಗೋಕರ್ಣ ಇದ್ದರು.