August 31, 2026
Monday, August 31, 2026
spot_img

ಆಯ್ಕೆಪಟ್ಟಿ ಬದಿಗಿಟ್ಟು ನೇಮಕ?: ಬ್ರೀಮ್ಸ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು

ಹೊಸದಿಗಂತ ವರದಿ ಬೀದರ್:

ಬ್ರೀಮ್ಸ್ ಸಂಸ್ಥೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಪ್ರಥಮ ದರ್ಜೆ ಸಹಾಯಕರ (ಲಿಪಿಕ ಸಿಬ್ಬಂದಿ) ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಆಯ್ಕೆ ಪಟ್ಟಿಯಲ್ಲಿ ಹೆಸರಿಲ್ಲದ ವ್ಯಕ್ತಿಗೆ ಕಾನೂನುಬಾಹಿರವಾಗಿ ಕಾರ್ಯಾದೇಶ ನೀಡಲಾಗಿದೆ ಎಂದು ಭಾರತೀಯ ಜೈ ಭೀಮ ದಳದ ಮುಖಂಡರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಬ್ರೀಮ್ಸ್ ಸಂಸ್ಥೆಯಲ್ಲಿ 10 ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ಭರ್ತಿಗಾಗಿ ಜಿಲ್ಲಾ ಕಾರ್ಮಿಕ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ 2022ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಈ ಹುದ್ದೆಗಳಿಗೆ ಸುಮಾರು 800 ರಿಂದ 1000 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆಯ್ಕೆ ಪ್ರಕ್ರಿಯೆಯ ನಂತರ ಶ್ರೇಣಿವಾರು 15 ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮೊದಲ ಹಂತದಲ್ಲಿ 10 ಮಂದಿಗೆ ಕಾರ್ಯಾದೇಶ ನೀಡಲಾಗಿತ್ತು.

ಆದರೆ ಆಯ್ಕೆಯಾದವರಲ್ಲಿ ಇಬ್ಬರು ಸೇವೆಗೆ ಹಾಜರಾಗದ ಹಿನ್ನೆಲೆಯಲ್ಲಿ ಕಾಯ್ದಿರಿಸಿದ ಪಟ್ಟಿಯಲ್ಲಿದ್ದ 11 ಮತ್ತು 12ನೇ ಕ್ರಮಾಂಕದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕಾಗಿತ್ತು. ಆದರೆ 11ನೇ ಕ್ರಮಾಂಕದ ಅಭ್ಯರ್ಥಿಗೆ ಮಾತ್ರ ಕಾರ್ಯಾದೇಶ ನೀಡಲಾಗಿದ್ದು, 12ನೇ ಕ್ರಮಾಂಕದ ಅಭ್ಯರ್ಥಿಯನ್ನು ಕಡೆಗಣಿಸಿ ಆಯ್ಕೆ ಪಟ್ಟಿಯಲ್ಲಿ ಹೆಸರೇ ಇಲ್ಲದ ಅಂಬ್ರೇಶ ತಂದೆ ಶಿವಮೂರ್ತಿ ಬಟ್ನಾಪೂರೆ ಅವರಿಗೆ ಕಾನೂನುಬಾಹಿರವಾಗಿ ನೇಮಕಾತಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಇದನ್ನೂ ಓದಿ:

ನೇಮಕಾತಿ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ನಡೆದಿದ್ದು, ಲಂಚದ ಆರೋಪವೂ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಂಬ್ರೇಶ ಅವರಿಗೆ ನೀಡಿರುವ ಕಾರ್ಯಾದೇಶವನ್ನು ತಕ್ಷಣ ಹಿಂಪಡೆದು, ಇದುವರೆಗೆ ಪಡೆದಿರುವ ವೇತನವನ್ನು ಬ್ರೀಮ್ಸ್ ಸಂಸ್ಥೆಗೆ ವಾಪಸ್ ಪಡೆಯಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದು ವಾರದೊಳಗೆ ಕ್ರಮ ಕೈಗೊಳ್ಳದಿದ್ದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಅಧ್ಯಕ್ಷ ಅಂಬೇಡ್ಕರ ಸಾಗರ, ತಾಲೂಕು ಅಧ್ಯಕ್ಷ ದೇವಿಂದ್ರ ಶರ್ಮಾ, ಜಿಲ್ಲಾ ಕಾರ್ಯದರ್ಶಿ ಸುಶೀಲ ದೊಡ್ಡಬಾವಿ, ಜಿಲ್ಲಾ ಸಂಚಾಲಕ ಸಚಿನ್ ಸಾಗರ, ಜಿಲ್ಲಾ ಖಜಾಂಚಿ ರಾಮು ದೊಡ್ಡಬಾವಿ ಹಾಗೂ ಉಮೇಶ ಕಾಂಬಳೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !