Saturday, October 11, 2025

ಭಾರತದ ಮಾದರಿ ನಡೆಗೆ ಮೆಚ್ಚುಗೆ: ಬ್ರಿಟನ್‌ನಲ್ಲೂ ಆಧಾರ್‌ ಮಾದರಿಯ ಐಡಿ ಕಾರ್ಡ್‌ ಜಾರಿಗೆ ಪ್ಲಾನ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಎರಡು ದಿನಗಳ ಭಾರತ ಪ್ರವಾಸದಲ್ಲಿರುವ ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಇನ್ಫೋಸಿಸ್ ಸಹ-ಸಂಸ್ಥಾಪಕ ಮತ್ತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧ್ಯಕ್ಷ ನಂದನ್ ನಿಲೇಕಣಿ ಅವರನ್ನು ಭೇಟಿ ಮಾಡಿ, ಆಧಾರ್ ಮಾದರಿಯಲ್ಲಿ ಯುಕೆಯಲ್ಲಿ ಡಿಜಿಟಲ್ ಐಡಿ ವ್ಯವಸ್ಥೆಯನ್ನು ಜಾರಿಗೆ ತರುವ ಯೋಜನೆ ಕುರಿತು ಮಾತುಕತೆ ನಡೆಸಿದ್ದಾರೆ.

ನಿಲೇಕಣಿ ಅವರೊಂದಿಗಿನ ಭೇಟಿಯು ಇನ್ಫೋಸಿಸ್ ಜೊತೆಗಿನ ಸಂಭಾವ್ಯ ವಾಣಿಜ್ಯ ಒಪ್ಪಂದದ ಬಗ್ಗೆ ಅಲ್ಲ ಮತ್ತು ಯುಕೆ ಸರ್ಕಾರ ಆಧಾರ್ ಯೋಜನೆಗೆ ಸಂಬಂಧಿಸಿದಂತೆ ತನ್ನದೇ ಆದ ಆವೃತ್ತಿಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಸ್ಟಾರ್ಮರ್ ಕಚೇರಿಯ ವಕ್ತಾರರು ಹೇಳಿದ್ದಾರೆ.

ಯುಕೆಯಲ್ಲಿ ಡಿಜಿಟಲ್ ಐಡಿ ಕಾರ್ಡ್‌ಗಳಿಗೆ ಬೆಂಬಲ ಕುಸಿದಿದೆ ಮತ್ತು ಎಲ್ಲಾ ವಿರೋಧ ಪಕ್ಷಗಳು ಈ ಯೋಜನೆಯನ್ನು ವಿರೋಧಿಸುವುದಾಗಿ ಹೇಳಿವೆ. ಆದಾಗ್ಯೂ, ಯುಕೆ ಪ್ರಧಾನಿ ತಮ್ಮ ಯೋಜನೆಯ ಬಗ್ಗೆ ಆಶಾವಾದಿಯಾಗಿದ್ದಾರೆ.

ನಾವು ಭಾರತ ಎಂಬ ದೇಶಕ್ಕೆ ಹೋಗುತ್ತಿದ್ದೇವೆ, ಅಲ್ಲಿ ಅವರು ಈಗಾಗಲೇ ಐಡಿ ಮಾಡಿ ಅದರಲ್ಲಿ ಭಾರಿ ಯಶಸ್ಸನ್ನು ಸಾಧಿಸಿದ್ದಾರೆ ಎಂದು ಮುಂಬೈಗೆ ಹೊರಡುವ ಮೊದಲು ಮಾಧ್ಯಮಗಳಿಗೆ ತಿಳಿಸಿದ್ದರು.

ಕಳೆದ ತಿಂಗಳು, ಬ್ರಿಟಿಷ್ ನಾಗರಿಕರು ಮತ್ತು ಖಾಯಂ ನಿವಾಸಿಗಳು ಕೆಲಸ ಪಡೆಯಲು ಕಡ್ಡಾಯ ಡಿಜಿಟಲ್ ಗುರುತಿನ ಚೀಟಿ ಅಗತ್ಯವಿದೆ ಎಂದು ಸ್ಟಾರ್ಮರ್ ಘೋಷಿಸಿದ್ದಾರೆ.

ಡಿಜಿಟಲ್ ಐಡಿ, ಜನರು ಆರೋಗ್ಯ ರಕ್ಷಣೆ, ಕಲ್ಯಾಣ, ಮಕ್ಕಳ ಆರೈಕೆ ಮತ್ತು ಇತರ ಸಾರ್ವಜನಿಕ ಸೇವೆಗಳನ್ನು ಪಡೆಯಲು ಮತ್ತಷ್ಟು ಅನುಕೂಲ ಎಂದು ಅವರು ಹೇಳಿದ್ದಾರೆ.

error: Content is protected !!