ಹೊಸದಿಗಂತ ವರದಿ , ಅರಸೀಕೆರೆ :
ನಗರದ ಗಾಂಧಿ ನಗರದಲ್ಲಿರುವ ಐತಿಹಾಸಿಕ ಪ್ರಸನ್ನ ಗಣಪತಿ ಪೆಂಡಾಲಿನಲ್ಲಿ ಈ ಬಾರಿ ನೂತನವಾಗಿ ನಿರ್ಮಿಸಿದ್ದ ವೈಭವೋಪೇತ ಮೈಸೂರು ಅರಮನೆ ಶೈಲಿಯ ದರ್ಬಾರಿನಲ್ಲಿ 82 ನೇ ವರ್ಷದ 62 ದಿನಗಳ ಕಾಲದ ಗಣಪತಿ ಮೂರ್ತಿಯ ಮಹೋತ್ಸವವು ನ. 18 ರಂದು ನಡೆದ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವದೊಂದಿಗೆ ಸಂಪನ್ನಗೊಂಡಿತು.
ನ. 17 ರಂದು ಗಣಪತಿ ಮೂರ್ತಿಯನ್ನು ಗದ್ದುಗೆಯಿಂದ ತೆರವುಗೊಳಿಸಿದ ನಂತರ ಶಾಸಕ ಕೆ. ಎಂ. ಶಿವಲಿಂಗೇಗೌಡ ಅವರು ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ನಗರದ ಗ್ರಂಥಾಲಯ ರಸ್ತೆಯಿಂದ ಹೊರಟ ಗಣಪತಿ ಮೂರ್ತಿಯ ಅದ್ದೂರಿ ಮೆರವಣಿಗೆ ಉತ್ಸವವು ನಗರದ ಹಾಸನ ರಸ್ತೆ, ಸಾಯಿನಾಥ ರಸ್ತೆ, ಪೇಟೆ ಬೀದಿ, ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ತಾಲ್ಲೂಕು ಕಚೇರಿ ತಲುಪಿತು, ಪುನಃ ತಾಲ್ಲೂಕು ಕಚೇರಿ ಬಳಿಯಿಂದ ಅದೇ ರಾಷ್ಟ್ರೀಯ ಹೆದ್ದಾರಿ 206 ರ ಮೂಲಕ ಸಾಗಿ ನಗರದ ಕಂತೇನಹಳ್ಳಿ ಬಡಾವಣೆಯ ಸಮೀಪವಿರುವ ಐತಿಹಾಸಿಕ ಹೊಯ್ಸಳರ ಕಾಲದ ಅರಸಿ ಕೆರೆಗೆ ರಾತ್ರಿ 8 ಗಂಟೆಗೆ ಬಂದು ತಲುಪಿತು.
ಮೆರವಣಿಗೆ ಸಾಗಿದ ರಸ್ತೆ ಉದ್ದಕ್ಕೂ ರಸ್ತೆಗಳನ್ನು ಸ್ವಚ್ಛಗೊಳಿಸಿ ಹಸಿರು ತೋರಣಗಳು ಹಾಗೂ ವಿದ್ಯುತ್ ದೀಪಗಳಿಂದ ನಗರವನ್ನು ನವ ವಧುವಿನಂತೆ ಸಿಂಗರಿಸಲಾಗಿತ್ತು, ರಸ್ತೆ ಉದ್ದಕ್ಕೂ ಭಕ್ತರು ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು, ಜತೆಗೆ ಕೆಲವು ಭಕ್ತರು ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಲ್ಲಲ್ಲಿ ನಗರದ ಪ್ರಮುಖ ವೃತ್ತಗಳಲ್ಲಿ ಕೆಲವು ಸಂಘ ಸಂಸ್ಥೆಗಳು ಮತ್ತು ಯುವಕರ ಬಳಗದಿಂದ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವದ ಹಿನ್ನೆಲೆಯಲ್ಲಿ ಭಕ್ತರಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ನ. 18 ರ ರಾತ್ರಿ 8 ಗಂಟೆಗೆ ನಗರದ ಕಂತೇನಹಳ್ಳಿ ದೊಡ್ಡ ಕೆರೆಯ ಬಳಿ ಭಾರಿ ಮದ್ದುಗುಂಡುಗಳ ಪ್ರದರ್ಶನದ ನಂತರ ಗಣಪತಿ ಮೂರ್ತಿಯನ್ನು ತೆಪ್ಪೋತ್ಸವದ ಮೂಲಕ ವಿಸರ್ಜಿಸಲಾಯಿತು.
ಕಳೆದ ವರ್ಷದ ಇದೇ ಅವಧಿಯಲ್ಲಿ ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲಿ ಈ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವ ನೆರವೇರಿದ್ದ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದಲ್ಲದೇ ಶಾಸಕ ಕೆ. ಎಂ. ಶಿವಲಿಂಗೇಗೌಡರ ಅಭಿಮಾನಿಗಳು ಹಾಗೂ ಕಳೆದ ವಿಧಾನಸಭಾ ಚುನಾವಣೆಯ ಪರಾಜಿತ ಜೆಡಿಎಸ್ ಅಭ್ಯರ್ಥಿ ಎನ್. ಆರ್. ಸಂತೋಷ್ ಬೆಂಬಲಿಗರ ನಡುವೆ ಜಿದ್ದಾಜಿದ್ದಿನ ಗಣಪತಿ ಮೂರ್ತಿಯ ವಿಸರ್ಜನಾ ಮಹೋತ್ಸವಕ್ಕೆ ಎಡೆಮಾಡಿಕೊಟ್ಟಿತ್ತು.
ಮೆರವಣಿಗೆ ಸಾಗುವ ಮಾರ್ಗದಲ್ಲಿ ವಿವಿಧ ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ, ಡೊಳ್ಳು ಕುಣಿತ, ಕರಡೇವು ಸೇರಿದಂತೆ ವಿವಿಧ ವಾದ್ಯಗಳ ತಂಡಗಳು ಮೆರವಣಿಗೆಗೆ ಮೆರಗು ನೀಡಿದವು, ಡಿಜೆ ಮ್ಯಾಜಿಕ್ ಶೋ ಗಳು ಮೆರವಣಿಗೆ ಉದ್ದಕ್ಕೂ ಸಾಗಿದವು.