ಮಕ್ಕಳಿಗೆ ಲೈಂಗಿಕ ಶಿಕ್ಷಣ ನೀಡುವುದು ಅವರನ್ನು ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕವಾಗಿ ಆರೋಗ್ಯಕರವಾಗಿ ಬೆಳೆಸಲು ಬಹಳ ಅಗತ್ಯ. ಇಂತಹ ಶಿಕ್ಷಣವನ್ನು ಮನೆಮಟ್ಟದಲ್ಲಿ ನೀಡುವುದು ಮಕ್ಕಳಿಗೆ ನಂಬಿಕೆಯ ವಾತಾವರಣದಲ್ಲಿ ಯಥಾರ್ಥ ಜ್ಞಾನವನ್ನು ನೀಡಲು ನೆರವಾಗುತ್ತದೆ. ಇದರಿಂದ ಅವರು ತಪ್ಪು ಮಾಹಿತಿ, ಭಯ ಅಥವಾ ಕುತೂಹಲದಿಂದ ಬರುವ ಸಮಸ್ಯೆಗಳಿಂದ ದೂರವಿರಬಹುದು.
ಪೋಷಕರಾಗಿ ನಾವು ಮಕ್ಕಳಿಗೆ, ಮಾನವ ಅಂಗರಚನಾಶಾಸ್ತ್ರ, ಸಂತಾನೋತ್ಪತ್ತಿ, ಗರ್ಭನಿರೋಧಕ, ಲೈಂಗಿಕವಾಗಿ ಹರಡುವ ಸೋಂಕುಗಳು ಮತ್ತು ಆರೋಗ್ಯಕರ ಸಂಬಂಧಗಳ ಬಗ್ಗೆ ಮಕ್ಕಳಿಗೆ ನಿಖರವಾದ ಮತ್ತು ವಯಸ್ಸಿಗೆ ಸೂಕ್ತವಾದ ಮಾಹಿತಿಯನ್ನು ಒದಗಿಸುವುದು ಮುಖ್ಯವಾಗಿದೆ.
ಮಕ್ಕಳಿಗೆ ಅವರ ವಯಸ್ಸಿಗೆ ತಕ್ಕಂತೆ ಮಾಹಿತಿ ನೀಡಿ:
ನಿಮ್ಮ ಮಕ್ಕಳೊಂದಿಗೆ ಚಿಕ್ಕ ವಯಸ್ಸಿನಲ್ಲಿಯೇ ಅಂಗರಚನಾಶಾಸ್ತ್ರ ಮತ್ತು ಸಂಬಂಧಗಳ ಬಗ್ಗೆ ಸರಳ ಮತ್ತು ವಯಸ್ಸಿಗೆ ಸೂಕ್ತವಾದ ಭಾಷೆಯನ್ನು ಬಳಸಿ ಮಾತನಾಡಲು ಪ್ರಾರಂಭಿಸಿ. ಅವರು ವಯಸ್ಸಾದಂತೆ, ನೀವು ಹೆಚ್ಚು ವಿವರವಾದ ಮಾಹಿತಿಯನ್ನು ಒದಗಿಸಬಹುದು.
ಉದಾ: ಶಿಶುಮಕ್ಕಳಿಗೆ ಅಂಗಾಂಗಗಳ ಹೆಸರುಗಳನ್ನು ಸರಿಯಾಗಿ ಕಲಿಸಿರಿ.
ಲೈಂಗಿಕ ವಿಷಯಗಳ ಬಗ್ಗೆ ಮಾತುಕತೆ ನೈಸರ್ಗಿಕವಾಗಿರಲಿ:
ಲೈಂಗಿಕ ವಿಷಯಗಳು ‘ತಪ್ಪು’ ಅಥವಾ ‘ಅಪರಾಧ’ ಭಾವನೆ ಉಂಟುಮಾಡದಂತೆ ಮಾತನಾಡಬೇಕು. ಇದರಿಂದ ಮಕ್ಕಳಲ್ಲಿ ಇದು ತಪ್ಪು ಎಂಬ ಭಾವನೆ ಬರುವುದಿಲ್ಲ.
ವಿಶ್ವಾಸಾರ್ಹ ಮೂಲಗಳನ್ನು ಬಳಸಿ:
ನಿಮ್ಮ ಮಕ್ಕಳಿಗೆ ಲೈಂಗಿಕ ಶಿಕ್ಷಣದ ಬಗ್ಗೆ ಕಲಿಸಲು ನೀವು ನಿಖರ ಮತ್ತು ನವೀಕೃತ ಸಂಪನ್ಮೂಲಗಳನ್ನು ಬಳಸುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ನೀವು ಪುಸ್ತಕಗಳು, ವೀಡಿಯೊಗಳು, ಆನ್‌ಲೈನ್ ಸಂಪನ್ಮೂಲಗಳನ್ನು ಬಳಸಬಹುದು ಅಥವಾ ಆರೋಗ್ಯ ವೃತ್ತಿಪರರಿಂದ ಮಾರ್ಗದರ್ಶನ ಪಡೆಯಬಹುದು.
ಬದುಕಿನ ಘಟನೆಯೊಂದಿಗೆ ಕಲಿಕೆ:
ಗರ್ಭಧಾರಣೆ, ಹೆರಿಗೆ, ಮಾಸಿಕ ಧರ್ಮ ಮುಂತಾದ ವಿಷಯಗಳನ್ನು ದಿನನಿತ್ಯದ ಘಟನೆಗಳಲ್ಲಿಯೇ ವಿವರಿಸಿ. ಇದರಿಂದ ಮಕ್ಕಳಿಗೆ ಮುಂದೆ ಭವಿಷ್ಯದಲ್ಲಿ ಇಂತಹ ವಿಷಯಗಳ ಕುರಿತಾದ ಅಂಜಿಕೆ ಇರುವುದಿಲ್ಲ.
ಭದ್ರತೆ ಮತ್ತು ಗುರಿ ಸ್ಪಷ್ಟಪಡಿಸಿ:
“ನಿನ್ನ ದೇಹ ನಿನ್ನ ಸ್ವತ್ತು”, “ಯಾರು ನಿನ್ನನ್ನು ಅನುಚಿತವಾಗಿ ಸ್ಪರ್ಶಿಸಬಾರದು” ಎಂಬ ಬಗ್ಗೆ ಮಕ್ಕಳಿಗೆ ತಿಳಿಸಿ. ಒಳ್ಳೆಯ ಸ್ಪರ್ಶ – ಕೆಟ್ಟ ಸ್ಪರ್ಶಗಳ ವ್ಯತ್ಯಾಸ ಕಲಿಸಿ ಕೊಡಿ.
ಪ್ರಶ್ನೆಗಳು ಮತ್ತು ಚರ್ಚೆಯನ್ನು ಪ್ರೋತ್ಸಾಹಿಸಿ:
ನಿಮ್ಮ ಮಕ್ಕಳು ಲೈಂಗಿಕತೆ ಮತ್ತು ಸಂಬಂಧಗಳ ಬಗ್ಗೆ ಪ್ರಶ್ನೆಗಳನ್ನು ಕೇಳಲು ಮತ್ತು ಅವರ ಆಲೋಚನೆಗಳು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಪ್ರೋತ್ಸಾಹಿಸಿ. ಮುಕ್ತ ಚರ್ಚೆಗಾಗಿ ಸುರಕ್ಷಿತ ಮತ್ತು ನಿರ್ಣಯಿಸದ ವಾತಾವರಣವನ್ನು ರಚಿಸಿ.
ಮನೆಮಟ್ಟದಲ್ಲಿ ಲೈಂಗಿಕ ಶಿಕ್ಷಣ ಮಕ್ಕಳನ್ನು ಬುದ್ಧಿವಂತ, ಆತ್ಮವಿಶ್ವಾಸಯುತ ಮತ್ತು ಜವಾಬ್ದಾರಿಯುತ ನಾಗರಿಕರಾಗಿ ಬೆಳೆಸಲು ಸಹಾಯಮಾಡುತ್ತದೆ. ಇದನ್ನು ನಾಚಿಕೆ ಅಥವಾ ಅಪಮಾನವಿಲ್ಲದೆ, ಪ್ರೀತಿ ಮತ್ತು ಜಾಣ್ಮೆಯಿಂದ ನೀಡುವುದು ಬಹುಮುಖ್ಯ.