ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಗಿಲು ಬಡಾವಣೆಯಲ್ಲಿ ನಡೆದ ಅಕ್ರಮವಾಸಿಗಳ ಮನೆ ತೆರವು ಕಾರ್ಯಾಚರಣೆ ಮತ್ತು ಅದರ ಹಿಂದಿನ ಜಾಲದ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಬೇಕು ಎಂದು ಬಿಜೆಪಿ ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಸೋಮವಾರ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ‘ಕೋಗಿಲು ಘಟನೆ’ಯ ಸತ್ಯಶೋಧನಾ ವರದಿಯನ್ನು ಹಸ್ತಾಂತರಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು.
“ತೆರವುಗೊಂಡವರ ಪಟ್ಟಿಯಲ್ಲಿ ಕೇರಳದ ಮೂಲದವರು ಒಬ್ಬರೂ ಇಲ್ಲ. ಆದರೂ ಕೇರಳ ಸಿಎಂ ಪಿಣರಾಯಿ ವಿಜಯನ್ ಮತ್ತು ಕೆ.ಸಿ. ವೇಣುಗೋಪಾಲ್ ಅತಿಯಾಗಿ ಮಾತನಾಡುತ್ತಿದ್ದಾರೆ. ನೆರೆಯ ರಾಜ್ಯದ ಮತ ಬ್ಯಾಂಕ್ ರಾಜಕಾರಣಕ್ಕಾಗಿ ನಮ್ಮ ರಾಜ್ಯವನ್ನು ಬಲಿ ಕೊಡಲಾಗುತ್ತಿದೆ,” ಎಂದು ವಿಶ್ವನಾಥ್ ಕಿಡಿಕಾರಿದರು.
ಪಟ್ಟಿಯಲ್ಲಿರುವ ಬಹುತೇಕ ಎಲ್ಲರೂ ಮುಸ್ಲಿಮರಾಗಿದ್ದು, ಒಬ್ಬರು ಮಾತ್ರ ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬೆಂಗಳೂರಿನಲ್ಲಿ ಚಿಂದಿ ಆಯುವವರ ಪೈಕಿ ಶೇ. 95ರಷ್ಟು ಮಂದಿ ರೋಹಿಂಗ್ಯಾಗಳಾಗಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
“ವಲಸಿಗರು ಹಣ ನೀಡಿ ಗಡಿ ದಾಟಿ ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರನ್ನು ಪಶ್ಚಿಮ ಬಂಗಾಳದ ಮೂಲಕ ಕರ್ನಾಟಕಕ್ಕೆ ಕರೆತರಲು ಒಂದು ದೊಡ್ಡ ತಂಡವೇ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇವರ ಬಳಿ ಅಕ್ರಮವಾಗಿ ಪಡೆದ ಕಾರ್ಡ್‌ಗಳಿವೆ,” ಎಂದು ಹೇಳಿದರು.
ಬೆಂಗಳೂರಿನ ಸರ್ಕಾರಿ ಜಾಗಗಳಲ್ಲಿ ಹೊಸದಾಗಿ ನಿರ್ಮಾಣವಾಗುತ್ತಿರುವ ಗುಡಿಸಲುಗಳನ್ನು ಸರ್ಕಾರ ಕೂಡಲೇ ತೆರವುಗೊಳಿಸಬೇಕು. ಅಕ್ರಮ ವಲಸಿಗರಿಂದ ನಗರದ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಅವರು ಎಚ್ಚರಿಸಿದರು.


