ಹೊಸದಿಗಂತ ಡಿಜಿಟಲ್ ಡೆಸ್ಕ್;
ತಮ್ಮ ಕ್ಷೇತ್ರದಲ್ಲಿ ದಲಿತರು ಇರಬಾರದು ಎಂದು ಕಿರುಕುಳ ಕೊಟ್ಟಿದ್ದಾರೆ. ನಾವೇನು ದಲಿತರಾಗಿದ್ದೇ ತಪ್ಪಾ? ನಮಗೆ ಬದುಕುವ ಹಕ್ಕು ಇಲ್ಲವಾ? ಸರ್ಕಾರಕ್ಕೆ ಮೃತ ಪಿಎಸ್ಐ ಪರಶುರಾಮ ಅವರ ಸಹೋದರ ಹನುಮಂತಪ್ಪನ ಪ್ರಶ್ನೆಗಳಿವು.
ತಾಲೂಕಿನ ಸೋಮನಾಳ ಗ್ರಾಮದ ಮೃತ ಪಿಎಸ್ಐ ಪರಶುರಾಮ ನಿವಾಸಕ್ಕೆ ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಅವರು ಭೇಟಿ ನೀಡಿದ ವೇಳೆ ಅವರ ಮುಂದೆ ಪರಶುರಾಮ ಅವರ ಸಹೋದರ ಹನುಮಂತಪ್ಪ ಅಳಲು ತೋಡಿಕೊಂಡರು.
ಯಾದಗಿರಿಗೆ ಹೋಗಿ 7 ತಿಂಗಳಾಗಿದ್ದು, ಅದರಲ್ಲಿ ನಾಲ್ಕು ತಿಂಗಳು ಚುನಾವಣಾ ಕರ್ತವ್ಯಕ್ಕೆ ಹಾಕಿದ್ದರು. ದಿಢೀರನೇ ವರ್ಗಾವಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಒಳ್ಳೇದು ಮಾಡಿದ್ದರೆ ಅಧಿಕಾರಿ ಇರಬಾರದು. ಇಷ್ಟು ತಿಂಗಳು ಇದದ್ದೇ ಹೆಚ್ಚು ಎಂದು ಮೃತ ಪಿಎಸ್ಐ ಪರಶುರಾಮ ನನ್ನ ಬಳಿ ಹೇಳಿದ್ದನು. ನಾವು ದಲಿತರಾಗಿದ್ದೇ ತಪ್ಪಾ? ಇಗಾಲೂ ಮೇಲ್ಜಾತಿ- ಕೆಳಜಾತಿ ಎಂದು ಪ್ರತ್ಯೇಕಿಸುವುದು ಎಷ್ಟು ಸರಿ? ಆಡಳಿತ ವ್ಯವಸ್ಥೆಯಲ್ಲಿರುವ ಜನಪ್ರತಿನಿಧಿಗಳೇ ಹೀಗೆ ಹೇಳಿದರೆ ಎಷ್ಟು ಸರಿ? ಈ ರೀತಿಯ ಜಾತಿ ನಿಂದನೆ ಸರಿಯೇ ಎಂದು ಆರ್.ಅಶೋಕ್ ಅವರ ಮುಂದೆ ಪ್ರಶ್ನಿಸಿದರು.
ನಮ್ಮದು ಬಡ ಕುಟುಂಬ. ನನ್ನ ತಮ್ಮ ಮೃತನಾದ ಮೇಲೂ ಅಲ್ಲಿನ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಸೊಸೆ ಗರ್ಭಿಣಿ. ದೂರು ನೀಡಿ 16 ಗಂಟೆ ಬಳಿಕ ಪ್ರಕರಣ ದಾಖಲಿಸಿದ್ದಾರೆ. ಜನರು ಪ್ರತಿಭಟನೆ ಮಾಡಿದರೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಪ್ರಕರಣ ದಾಖಲಿಸಲು ಹಿಂದೇಟು ಹಾಕಿದ್ದು ನನಗೆ ಸಾಕಷ್ಟು ನೋವಾಗಿದೆ. ಒಬ್ಬ ಪೊಲೀಸ್ ಅಧಿಕಾರಿ ಮೃತಪಟ್ಟರೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ನಿರ್ಲಕ್ಷ್ಯ ಮಾಡಿದ್ದಾರೆ. ಮೃತ ಪಿಎಸ್ಐ ಪರಶುರಾಮ ಪತ್ನಿ 9 ತಿಂಗಳ ಗರ್ಭಿಣಿ ಇದ್ದು, ದೂರು ನೀಡಿದರೂ, ಎಫ್ಐಆರ್ ಮಾಡಿಲ್ಲ. 16 ಗಂಟೆ ಸತಾಯಿಸಿದ್ದಾರೆ ಎಂದು ದುಃಖ ತೋಡಿಕೊಂಡರು.