ಅನೇಕ ಶತಮಾನಗಳಿಂದ ಭಾರತದ ಬೆಟ್ಟಗಳು ಮತ್ತು ಪರ್ವತಗಳು ಕೇವಲ ನೈಸರ್ಗಿಕ ಸೌಂದರ್ಯಕ್ಕಾಗಿ ಪ್ರಸಿದ್ಧವಾಗಿರುವುದಿಲ್ಲ, ಇವು ದೇಶದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಂಸ್ಕೃತಿಯ ಜೀವಂತ ಸಾಕ್ಷಿಗಳಾಗಿವೆ. ಉತ್ತರದ ಹಿಮಾಲಯದಿಂದ ದಕ್ಷಿಣದ ಶಿಲಾಶ್ರೇಣಿಗಳವರೆಗೆ ಹರಡಿರುವ ಈ ಪವಿತ್ರ ಬೆಟ್ಟಗಳು ದೇವರುಗಳು, ಋಷಿಗಳು ಹಾಗೂ ಯೋಗಿಗಳ ತಪಸ್ಸಿನ ಸ್ಥಳಗಳಾಗಿ ಖ್ಯಾತಿ ಪಡೆದಿವೆ. ಇವುಗಳಿಗೆ ಭೇಟಿ ನೀಡುವುದು ಕೇವಲ ಯಾತ್ರೆಯಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ಮತ್ತು ಆತ್ಮಸಾಕ್ಷಾತ್ಕಾರ ನೀಡುವ ಅನುಭವವೂ ಆಗಿದೆ.
ಮೌಂಟ್ ಗಿರ್ನಾರ್ – ನಂಬಿಕೆಯ ಪರ್ವತ: ಗುಜರಾತ್‌ನ ಗಿರ್ನಾರ್ ಪರ್ವತವು ಭಾರತದ ಅತ್ಯಂತ ಹಳೆಯ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಹಿಂದು ಮತ್ತು ಜೈನ ಧರ್ಮಗಳಿಗೂ ಪವಿತ್ರವಾದ ಈ ಸ್ಥಳಕ್ಕೆ ತಲುಪಲು 9,000ಕ್ಕೂ ಹೆಚ್ಚು ಕಲ್ಲಿನ ಮೆಟ್ಟಿಲುಗಳನ್ನು ಹತ್ತಬೇಕು. ದಾರಿಯಲ್ಲೇ ದತ್ತಾತ್ರೇಯ ದೇವರು ಹಾಗೂ ಜೈನ ತೀರ್ಥಂಕರರಿಗೆ ಸಮರ್ಪಿತ ದೇವಾಲಯಗಳು ಇವೆ.

ಮೌಂಟ್ ಅಬು – ಜೈನ ವಾಸ್ತುಶಿಲ್ಪದ ಮಾಣಿಕ್ಯ: ರಾಜಸ್ಥಾನದ ಏಕೈಕ ಬೆಟ್ಟವಾದ ಮೌಂಟ್ ಅಬು ತನ್ನ ದಿಲ್ವಾರ ದೇವಾಲಯಗಳಿಗಾಗಿ ಪ್ರಸಿದ್ಧ. ಅಮೃತಶಿಲೆಯಿಂದ ನಿರ್ಮಿತ ಈ ದೇವಾಲಯಗಳು ಜೈನ ವಾಸ್ತುಶಿಲ್ಪದ ಶ್ರೇಷ್ಠ ಉದಾಹರಣೆಗಳು.

ಅರುಣಾಚಲ ಬೆಟ್ಟ – ಶಿವನ ಆಧ್ಯಾತ್ಮಿಕ ಪ್ರತಿರೂಪ: ತಮಿಳುನಾಡಿನ ಅರುಣಾಚಲ ಬೆಟ್ಟವು ಶಿವನ ರೂಪವೆಂದು ನಂಬಲಾಗಿದೆ. ಇಲ್ಲಿ ನಡೆಯುವ “ಗಿರಿವಲಂ” ಯಾತ್ರೆ ಅತ್ಯಂತ ಪವಿತ್ರವಾದದ್ದು. ಹುಣ್ಣಿಮೆಯಂದು ಸಾವಿರಾರು ಭಕ್ತರು 14 ಕಿಲೋಮೀಟರ್ ಪಥದಲ್ಲಿ ಪ್ರದಕ್ಷಿಣೆ ಹಾಕುತ್ತಾ ಭಕ್ತಿ ಪಾಠಗಳನ್ನು ಪಠಿಸುತ್ತಾರೆ. ಇದು ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ನೀಡುವ ಅನುಭವವಾಗಿದೆ.

ಚಾಮುಂಡಿ ಬೆಟ್ಟ – ದುರ್ಗಾದೇವಿಯ ಶಕ್ತಿ ಸ್ಥಳ: ಕರ್ನಾಟಕದ ಮೈಸೂರು ಸಮೀಪದ ಚಾಮುಂಡಿ ಬೆಟ್ಟವು ಮಹಿಷಾಸುರ ಮರ್ಧಿನಿ ಚಾಮುಂಡೇಶ್ವರಿ ದೇವಿಗೆ ಸಮರ್ಪಿತವಾಗಿದೆ. 1,000 ಮೆಟ್ಟಿಲುಗಳನ್ನು ಹತ್ತಿ ತಲುಪುವ ಈ ದೇವಾಲಯದ ಮಾರ್ಗದಲ್ಲಿ ಬೃಹತ್ ನಂದಿ ಪ್ರತಿಮೆಯು ಪ್ರಮುಖ ಆಕರ್ಷಣೆ. ಇದು ಕರ್ನಾಟಕದ ಜನಪರ ಧಾರ್ಮಿಕ ತಾಣಗಳಲ್ಲಿ ಒಂದಾಗಿದೆ.

ಶತೃಂಜಯ ಬೆಟ್ಟ – ಜೈನ ಧರ್ಮದ ಪರಮ ಯಾತ್ರಾ ಸ್ಥಳ: ಗುಜರಾತ್‌ನ ಪಾಲಿಟಾನ ಬಳಿ ಇರುವ ಶತೃಂಜಯ ಬೆಟ್ಟವು 800ಕ್ಕೂ ಹೆಚ್ಚು ಶಿಲಾ ದೇವಾಲಯಗಳಿಗಾಗಿ ಪ್ರಸಿದ್ಧವಾಗಿದೆ. ಯಾತ್ರಿಕರು 3,000ಕ್ಕೂ ಹೆಚ್ಚು ಮೆಟ್ಟಿಲುಗಳನ್ನು ಹತ್ತಿ ತಲುಪಬೇಕಾದ ಈ ಸ್ಥಳವು ತಪಸ್ಸಿನ ಪ್ರತೀಕವಾಗಿದೆ. ಪ್ರಾಮಾಣಿಕ ಭಕ್ತರಿಗೆ ಮುಕ್ತಿ ದೊರಕುತ್ತದೆ ಎಂಬ ನಂಬಿಕೆ ಇದೆ.

