ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾವುದೇ ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ವಿರುದ್ಧ ಡೀಪ್ ಫೇಕ್ ತಂತ್ರಜ್ಞಾನ ಬಳಕೆಯಾಗಿದ್ದರೆ, ಅದು ಪ್ರಕಟವಾಗಿರುವ ಸಾಮಾಜಿಕ ಮಾಧ್ಯಮ ವೇದಿಕೆ ವಿರುದ್ಧ ದೂರು ದಾಖಲಿಸುವುದಕ್ಕೆ ಸರ್ಕಾರಿ ಅಧಿಕಾರಿಯೇ ನಿಮ್ಮ ಸಹಾಯಕ್ಕೆ ಬರಲಿದ್ದಾರೆ. ಹೀಗೆ ಎಫ್ಐಆರ್ ದಾಖಲಿಸುವುದಕ್ಕೆ ಸಹಕರಿಸಲೆಂದೇ ಕೇಂದ್ರ ಸರ್ಕಾರದ ಪರ ಅಧಿಕಾರಿಯೊಬ್ಬರನ್ನು ನೇಮಿಸುತ್ತಿರುವುದಾಗಿ ಮಾಹಿತಿ ತಂತ್ರಜ್ಞಾನ ಖಾತೆಯ ಸಹಾಯಕ ಸಚಿವ ರಾಜೀವ ಚಂದ್ರಶೇಖರ ಹೇಳಿದ್ದಾರೆ.
ಡೀಪ್ ಫೇಕ್ ಬಗ್ಗೆ ಸಾಮಾಜಿಕ ಜಾಲತಾಣಗಳು ಮತ್ತು ತಂತ್ರಜ್ಞಾನ ಸೇವೆ ಒದಗಿಸುವವರು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವನ್ನು ತಿಳಿಸುವುದಕ್ಕೆ ಶುಕ್ರವಾರ ನಾನಾ ಕಂಪನಿಗಳೊಂದಿಗೆ ನಡೆದ ಸಭೆಯ ಬಳಿಕ ಸಚಿವರು ಈ ಘೋಷಣೆ ಮಾಡಿದ್ದಾರೆ.
ಮೆಟಾ, ಗೂಗಲ್, ಟೆಲಿಗ್ರಾಂ, ಕೂ, ಶೇರ್‌ಚಾಟ್, ಆಪಲ್, ಹೆಚ್‌ಪಿ. ಡೆಲ್ ಸೇರಿದಂತೆ ಕಂಪನಿಗಳ ಅಧಿಕಾರಿಗಳ ಜೊತೆ ಎರಡನೇ ಹಂತದ ಸಭೆ ನಡೆದಿದೆ. ಈ ಮೊದಲು ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರೊಂದಿಗೆ ಇದೇ ರೀತಿಯ ಸಭೆ ನಡೆದಿತ್ತು. ಡೀಪ್ ಫೇಕ್ ಉಪಯೋಗಿಸಿ ವಿಷಯಗಳನ್ನು ಪೋಸ್ಟ್ ಮಾಡುವುದರಿಂದ ಬಳಕೆದಾರರನ್ನು ತಡೆಯುವ ಹೊಣೆ ಈ ಕಂಪನಿಗಳದ್ದೇ ಆಗಿದೆ ಎಂದಿರುವ ಸಚಿವರು, ಈ ನಿಟ್ಟಿನಲ್ಲಿ ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳದ ಕಂಪನಿ ಪ್ರತಿನಿಧಿಗಳನ್ನು ತರಾಟೆಗೆ ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ.
“ಈ ಇಂಟರ್ನೆಟ್ ಕಂಪನಿಗಳು ತಮ್ಮ ನೀತಿ-ನಿಯಮಾವಳಿಗಳನ್ನು ಮಾಹಿತಿ ತಂತ್ರಜ್ಞಾನದ ಹೊಸ ಕಾಯ್ದೆಗಳಿಗೆ ತಕ್ಕನಾಗಿ ರೂಪಿಸಿಕೊಂಡಿಲ್ಲ. ಪ್ರತಿಬಾರಿ ಬಳಕೆದಾರ ಲಾಗಿನ್ ಆಗುವಾಗಲೂ ಡೀಪ್ ಫೇಕ್ ಬಳಸಿ ಏನನ್ನೂ ಸೃಷ್ಟಿಸಬಾರದೆಂಬ ಎಚ್ಚರಿಕೆ ಪರದೆಯ ಮೇಲೆ ಬರುವಂತಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಹೊಣೆ ಈ ಇಂಟರ್ನೆಟ್ ಸಂಸ್ಥೆಗಳದ್ದೇ ಆಗಿದೆ” ಎಂದು ಸಚಿವರು ಹೇಳಿದ್ದಾರೆ.
ಇತ್ತೀಚೆಗೆ ಹಲವು ಸಂದರ್ಭಗಳಲ್ಲಿ ಡೀಪ್ ಫೇಕ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೇ ಆತಂಕ ವ್ಯಕ್ತಪಡಿಸಿದ್ದರು ಎಂಬುದಿಲ್ಲಿ ಸ್ಮರಣಾರ್ಹ.