ಸದ್ಯ ದೇಶಾದ್ಯಂತ ಕೀಟೋ ಡಯಟ್ ಫುಡ್ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ತೂಕವನ್ನು ವೇಗವಾಗಿ ಇಳಿಸಲು ಬಯಸುವವರಲ್ಲಿ ಇದು ಒಂದು ಟ್ರೆಂಡ್ ಆಗಿ ಪರಿಣಮಿಸಿದೆ. ಈ ಆಹಾರ ಪದ್ಧತಿ ತೂಕ ಇಳಿಸುವಲ್ಲಿ ಪರಿಣಾಮಕಾರಿ ಎಂದು ಹಲವರು ಅನುಸರಿಸುತ್ತಿದ್ದಾರೆ. ಆದರೆ ತಜ್ಞರ ಪ್ರಕಾರ, ದೇಹದ ಒಳಾಂಗಾಂಗಗಳ ಆರೋಗ್ಯದ ದೃಷ್ಟಿಯಿಂದ ಕೀಟೋ ಡಯಟ್ ಅಷ್ಟು ಸುರಕ್ಷಿತ ಅಲ್ಲ. ತೂಕವನ್ನು ಬೇಗ ಕಡಿಮೆ ಮಾಡಬಹುದು ಎಂಬ ಲಾಭದ ಜೊತೆಗೂ ಇದರಿಂದಾಗುವ ಅಡ್ಡ ಪರಿಣಾಮಗಳು ಗಂಭೀರವಾಗಿರಬಹುದು. ವಿಶೇಷವಾಗಿ ಹೃದಯಾಘಾತದ ಅಪಾಯ ಹೆಚ್ಚಾಗಬಹುದು ಎಂದು ವೈದ್ಯಕೀಯ ಅಧ್ಯಯನಗಳು ಎಚ್ಚರಿಸುತ್ತವೆ.
ಕೀಟೋ ಡಯಟ್‌ನಲ್ಲಿ ಕಾರ್ಬೋಹೈಡ್ರೇಟ್ ಅಂಶ ಬಹಳ ಕಡಿಮೆ ಇರುತ್ತದೆ. ಸಾಮಾನ್ಯವಾಗಿ ನಮ್ಮ ದೇಹಕ್ಕೆ ಸಮತೋಲನವಾಗಿ ಕಾರ್ಬೋಹೈಡ್ರೇಟ್, ಪ್ರೋಟಿನ್ ಮತ್ತು ಕೊಬ್ಬಿನ ಅಂಶ ಅಗತ್ಯವಿದೆ. ಆದರೆ ಕೀಟೋ ಡಯಟ್‌ನಲ್ಲಿ ಶೇಕಡಾ 70ರಷ್ಟು ಕೊಬ್ಬು, 25ರಷ್ಟು ಪ್ರೋಟಿನ್ ಮತ್ತು ಕೇವಲ 5ರಷ್ಟು ಕಾರ್ಬೋಹೈಡ್ರೇಟ್ ಮಾತ್ರ ಸೇವಿಸಲಾಗುತ್ತದೆ. ಇದು ಶರೀರದಲ್ಲಿ ತಾತ್ಕಾಲಿಕ ಶಕ್ತಿ ಬದಲಾವಣೆ ತರಬಹುದು. ಅಕ್ಕಿ, ರಾಗಿ, ಜೋಳ, ಹಣ್ಣುಗಳು, ಬೇಳೆ ಧಾನ್ಯಗಳು ಇತ್ಯಾದಿ ಕಾರ್ಬೋಹೈಡ್ರೇಟ್ ಇರುವ ಆಹಾರಗಳು ಸಂಪೂರ್ಣವಾಗಿ ತಪ್ಪಿಸಿಕೊಳ್ಳಲಾಗುತ್ತದೆ. ಬದಲಾಗಿ ಮಾಂಸ, ಮೊಟ್ಟೆ, ಬಾದಾಮಿ, ಪನ್ನೀರ್, ಬೆಣ್ಣೆ, ಚೀಸ್ ಮುಂತಾದ ಹೆಚ್ಚಿನ ಕೊಬ್ಬು ಮತ್ತು ಪ್ರೋಟಿನ್ ಅಂಶ ಹೊಂದಿದ ಆಹಾರಗಳನ್ನು ಮಾತ್ರ ಸೇವಿಸಲಾಗುತ್ತದೆ.
ಆದರೆ ತಜ್ಞರ ಎಚ್ಚರಿಕೆ ಏನೆಂದರೆ, ಇಂತಹ ಅಸಮತೋಲನ ಆಹಾರ ಪದ್ಧತಿ ದೀರ್ಘಾವಧಿಯಲ್ಲಿ ದೇಹಕ್ಕೆ ಹಾನಿ ಮಾಡಬಹುದು. ಪ್ರೋಟಿನ್ ಅಂಶಗಳ ಅತಿಯಾದ ಸೇವನೆ ರಕ್ತನಾಳಗಳನ್ನು ಹಾನಿ ಮಾಡುತ್ತದೆ. ಇದರಿಂದ ಹೃದಯದ ಮೇಲಿನ ಒತ್ತಡ ಹೆಚ್ಚಾಗುತ್ತದೆ. ಹೀಗಾಗಿ ಹೃದ್ರೋಗದ ಅಪಾಯ ಹೆಚ್ಚಾಗಬಹುದು. ಜೊತೆಗೆ ಕೀಟೋ ಡಯಟ್ ಮಾಡುವವರು ಶಕ್ತಿ ಕುಂದು, ಅಜೀರ್ಣ, ತಲೆನೋವು, ಮಲಬದ್ಧತೆ ಮುಂತಾದ ಸಮಸ್ಯೆಗಳನ್ನು ಎದುರಿಸಬಹುದು.
ಕೀಟೋ ಡಯಟ್ ತೂಕ ಕಡಿಮೆ ಮಾಡಲು ತಾತ್ಕಾಲಿಕವಾಗಿ ಸಹಾಯ ಮಾಡಬಹುದು. ಆದರೆ ದೀರ್ಘಾವಧಿಯಲ್ಲಿ ಇದರಿಂದಾಗುವ ಅಡ್ಡ ಪರಿಣಾಮಗಳನ್ನು ಮರೆಯಬಾರದು. ಹೃದಯ, ಯಕೃತ್ತು ಮತ್ತು ಕಿಡ್ನಿ ಆರೋಗ್ಯ ಕಾಪಾಡಲು ಸಮತೋಲನ ಆಹಾರ ಅತ್ಯಗತ್ಯ. ಹೀಗಾಗಿ ಕೀಟೋ ಡಯಟ್ ಮಾಡಲು ಬಯಸುವವರು ವೈದ್ಯರ ಸಲಹೆಯೊಂದಿಗೆ, ನಿಯಮಿತ ಅವಧಿಗೆ ಮಾತ್ರ ಅನುಸರಿಸುವುದು ಸೂಕ್ತ. ಅಂತಿಮವಾಗಿ, ಆರೋಗ್ಯವನ್ನು ಕಾಪಾಡುತ್ತ ತೂಕ ಇಳಿಕೆ ಮಾಡುವ ಮಾರ್ಗವೇ ಶಾಶ್ವತ ಪರಿಹಾರ.