ಲಾಲ್‌ಬಾಗ್ ನಲ್ಲಿ ಫೋಟೋಶೂಟ್‌ ಮಾಡೋ ಪ್ಲಾನ್ ಇದ್ಯಾ? ಹಾಗಾದ್ರೆ ಇವತ್ತೇ ಕ್ಯಾನ್ಸಲ್ ಮಾಡಿ ಬಿಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಬ್ಬನ್ ಪಾರ್ಕ್‌ನಲ್ಲಿ ಮದುವೆ ಹಾಗೂ ಚಲನಚಿತ್ರ ಚಿತ್ರೀಕರಣಕ್ಕೆ ನಿಷೇಧ ಜಾರಿಯಾದ ಬಳಿಕ, ಇದೀಗ ಲಾಲ್‌ಬಾಗ್ ಬೋಟಾನಿಕಲ್ ಗಾರ್ಡನ್ ಕೂಡ ಇದೇ ರೀತಿಯ ನಿರ್ಬಂಧಗಳಿಗೆ ಸಿದ್ಧವಾಗುತ್ತಿದೆ. ತೋಟಗಾರಿಕೆ ಇಲಾಖೆ ಲಾಲ್‌ಬಾಗ್‌ನೊಳಗಿನ ಮದುವೆ ಮೊದಲು ಮತ್ತು ನಂತರದ ಫೋಟೋಶೂಟ್‌ಗಳು, ಬೇಬಿ ಪೋರ್ಟ್‌ಫೋಲಿಯೊ, ಮಾಡೆಲಿಂಗ್ ರೀಲ್ಸ್‌ಗಳು ಹಾಗೂ ಇನ್‌ಸ್ಟಾಗ್ರಾಂ ಚಿತ್ರೀಕರಣಗಳಂತೆಯೇ ಇತರ ವಾಣಿಜ್ಯ ಚಟುವಟಿಕೆಗಳಿಗೆ ನಿಷೇಧ ತರಲು ಅಂತಿಮ ಹಂತದ ಪ್ರಸ್ತಾವನೆ ರೂಪಿಸುತ್ತಿದೆ.

ಹೆಚ್ಚು ಶಬ್ದ, ಕೃತಕ ಬೆಳಕುಗಳ ಬಳಕೆ, ನೈಸರ್ಗಿಕ ಪರಿಸರಕ್ಕೆ ತೊಂದರೆ, ಗೂಡುಕಟ್ಟಿದ ಜೇನುಗೂಡಿಗೆ ತೊಂದರೆ ಉಂಟು ಮಾಡುತ್ತಿರುವುದರಿಂದ, ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ಅನಿವಾರ್ಯವಾಗಿದೆ ಎಂದು ಹಿರಿಯ ತೋಟಗಾರಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕೆಲವೊಂದು ಸಂದರ್ಭಗಳಲ್ಲಿ ಜೇನುನೊಣ ಕಚ್ಚಿದ ಘಟನೆಗಳು ವರದಿಯಾಗಿವೆ. ಜೊತೆಗೆ ಚಿತ್ರೀಕರಣದ ವೇಳೆ ಅಶ್ಲೀಲ ಭಂಗಿಗಳು, ಬಟ್ಟೆ ಬದಲಾಯಿಸುವುದು, ಮರಗಳಿಗೆ ಹತ್ತುವುದು, ಹೂವಿನ ಹಾಸಿನ ಮೇಲೆ ನಿಲ್ಲುವುದು ಸೇರಿದಂತೆ ಶಿಸ್ತು ಇಲ್ಲದ ಅಭ್ಯಾಸಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ, ಇತರ ಸಂದರ್ಶಕರಿಗೆ ಹಾಗೂ ಮಕ್ಕಳಿಗೆ ತೊಂದರೆಯಾಗುತ್ತಿರುವುದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ನಿರ್ಬಂಧಗಳು ಕೇವಲ ಶಿಸ್ತು ಕಾಯ್ದಿರಿಸಲು ಮಾತ್ರವಲ್ಲದೆ, ಲಾಲ್‌ಬಾಗ್‌ನ ಜೀವವೈವಿಧ್ಯತೆಯ ಸಂರಕ್ಷಣೆಗಾಗಿ ಮಾಡಲಾಗಿದೆ. ಕಬ್ಬನ್ ಪಾರ್ಕ್ ಮಾದರಿಯಲ್ಲಿಯೇ ಈ ನಿಯಮಗಳು ಜಾರಿಗೊಳ್ಳಲಿದ್ದು, ತಜ್ಞರ ಸಮಿತಿಯಿಂದ ಶಿಫಾರಸುಗಳ ಆಧಾರದಲ್ಲಿ ತೋಟಗಾರಿಕೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!