ಇಂದಿನ ಕಾಲದಲ್ಲಿ ಬೆನ್ನುನೋವು (Back Pain) ಸರ್ವಸಾಮಾನ್ಯ ಸಮಸ್ಯೆಯಾಗಿದೆ. ಹೆಚ್ಚು ಹೊತ್ತು ಕುಳಿತುಕೊಳ್ಳುವುದು, ತಪ್ಪಾದ ಭಂಗಿ, ಸ್ನಾಯುಗಳ ದುರ್ಬಲತೆ, ವಯೋಸಹಜ ಕಾರಣಗಳು ಇತ್ಯಾದಿ ಕಾರಣಗಳಿಂದ ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕೆಲವೊಮ್ಮೆ ಇದು ತೀವ್ರವಾಗಿ ಕಾಡಿ ದಿನನಿತ್ಯದ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ. ಆದರೆ ಸರಳವಾದ ಕೆಲವು ಮನೆಮದ್ದುಗಳ ಮೂಲಕವೇ ಈ ಸಮಸ್ಯೆಯನ್ನು ಕಡಿಮೆ ಮಾಡಬಹುದು.
ಐಸ್ ಪ್ಯಾಕ್ ಬಳಕೆ
ಬೆನ್ನುನೋವು ಕಂಡುಬಂದ ಕೂಡಲೇ ಐಸ್ ಪ್ಯಾಕ್ ಬಳಸುವುದು ಅತ್ಯುತ್ತಮ ಪರಿಹಾರ. ತಂಪಿನ ಪರಿಣಾಮ ನೋವಿನ ತೀವ್ರತೆಯನ್ನು ಕಡಿಮೆ ಮಾಡಿ ಸ್ನಾಯುಗಳಿಗೆ ಆರಾಮ ನೀಡುತ್ತದೆ. ದಿನಕ್ಕೆ ಎರಡು ಅಥವಾ ಮೂರು ಬಾರಿ ಐಸ್ ಪ್ಯಾಕ್ ಇಟ್ಟರೆ ಉತ್ತಮ ಫಲಿತಾಂಶ ದೊರೆಯುತ್ತದೆ.

ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ
ಆಫೀಸ್‌ನಲ್ಲಿ ಅಥವಾ ಮನೆಯಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವವರಲ್ಲಿ ತಪ್ಪಾದ ಭಂಗಿಯಿಂದ ನೋವು ಹೆಚ್ಚಾಗುತ್ತದೆ. ಬೆನ್ನು ಹುರಿಯ ಎಲುಬುಗಳು ನೇರವಾಗಿರುವಂತೆ ಕುಳಿತುಕೊಳ್ಳುವುದು ಅಭ್ಯಾಸ ಮಾಡಿದರೆ ಬೆನ್ನುನೋವಿನಿಂದ ದೂರವಿರಬಹುದು.
ನಿತ್ಯ ಮಸಾಜ್ ಮಾಡಿ
ಸರಿಯಾದ ಆಯಿಂಟ್ಮೆಂಟ್‌ನಿಂದ ಬೆನ್ನು ಮಸಾಜ್ ಮಾಡಿದರೆ ನೋವು ಕಡಿಮೆಯಾಗುತ್ತದೆ. ಜೊತೆಗೆ ಮನಸ್ಸಿಗೆ ನಿರಾಳತೆ ಸಿಗುತ್ತದೆ. ಮಸಾಜ್ ಮಾಡುವುದರಿಂದ ರಕ್ತ ಸಂಚಲನ ಸುಧಾರಿಸಿ ಸ್ನಾಯುಗಳು ಬಲಗೊಳ್ಳುತ್ತವೆ.

ಬೆಳ್ಳುಳ್ಳಿ ಸೇವನೆ ಮತ್ತು ಎಣ್ಣೆ ಮಸಾಜ್
ಬೆಳ್ಳುಳ್ಳಿಯು ನೋವಿಗೆ ಉತ್ತಮ ಔಷಧ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 2-3 ಬೆಳ್ಳುಳ್ಳಿ ಎಸಳುಗಳನ್ನು ತಿಂದರೆ ನೋವು ಕಡಿಮೆಯಾಗುತ್ತದೆ. ಬೆಳ್ಳುಳ್ಳಿ ಎಣ್ಣೆಯಿಂದ ಮಸಾಜ್ ಮಾಡಿದರೂ ಸಹ ಉತ್ತಮ ಪರಿಹಾರ ದೊರೆಯುತ್ತದೆ.
ವ್ಯಾಯಾಮ ಮತ್ತು ಸ್ಟ್ರೆಚಿಂಗ್
ನಿತ್ಯ ವ್ಯಾಯಾಮದಿಂದ ಬೆನ್ನಿನ ಸ್ನಾಯುಗಳು ಬಲಗೊಳ್ಳುತ್ತವೆ. ವಿಶೇಷವಾಗಿ ಸ್ಟ್ರೆಚಿಂಗ್ ವ್ಯಾಯಾಮ ಬೆನ್ನುನೋವನ್ನು ತಡೆಗಟ್ಟಲು ಬಹಳ ಸಹಾಯಕ. ನಿಯಮಿತವಾಗಿ ವ್ಯಾಯಾಮ ಮಾಡಿದರೆ ನೋವು ಮರುಕಳಿಸುವ ಸಾಧ್ಯತೆ ಕಡಿಮೆ.

ಉಪ್ಪಿನ ನೀರಿನಿಂದ ಸ್ನಾನ
ಸ್ನಾನದ ನೀರಿಗೆ ಸ್ವಲ್ಪ ಉಪ್ಪು ಹಾಕಿ ಸ್ನಾನ ಮಾಡಿದರೆ ದೇಹಕ್ಕೆ ನಿರಾಳತೆ ದೊರೆಯುತ್ತದೆ. ಬೆನ್ನುನೋವು ತಗ್ಗಿ ಸ್ನಾಯುಗಳಿಗೆ ಶಾಂತಿ ಸಿಗುತ್ತದೆ. ಆದರೆ ನೀರು ಅತಿಯಾಗಿ ಬಿಸಿಯಾಗಬಾರದು.
ಹಾಲಿಗೆ ಅರಿಶಿನ ಮತ್ತು ಜೇನುತುಪ್ಪ ಬೆರೆಸಿ ಕುಡಿಯಿರಿ
ಅರಿಶಿನವು ಆಂಟಿ-ಇನ್‌ಫ್ಲಮೇಟರಿ ಗುಣ ಹೊಂದಿದ್ದು ನೋವು ಕಡಿಮೆ ಮಾಡುತ್ತದೆ. ಹಾಲಿಗೆ ಅರಿಶಿನ ಪುಡಿ ಮತ್ತು ಜೇನುತುಪ್ಪ ಬೆರೆಸಿ ಕುಡಿಯುವುದರಿಂದ ಬೆನ್ನುನೋವು ನಿವಾರಣೆಯಾಗುತ್ತದೆ.
ಬೆನ್ನುನೋವು ಸಾಮಾನ್ಯವಾದರೂ ನಿರ್ಲಕ್ಷಿಸಿದರೆ ಗಂಭೀರವಾಗಬಹುದು. ವೈದ್ಯಕೀಯ ನೆರವು ಅಗತ್ಯವಿರುವ ಸಂದರ್ಭಗಳೂ ಉಂಟು. ಆದರೆ ದಿನನಿತ್ಯದಲ್ಲಿ ಈ ಮನೆಮದ್ದುಗಳನ್ನು ಪಾಲಿಸಿದರೆ ಬೆನ್ನುನೋವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. ಹೀಗಾಗಿ ಸರಿಯಾದ ಜೀವನಶೈಲಿ, ನಿಯಮಿತ ವ್ಯಾಯಾಮ ಮತ್ತು ಮನೆಮದ್ದುಗಳ ಬಳಕೆ ಬೆನ್ನಿನ ಆರೋಗ್ಯವನ್ನು ಕಾಪಾಡಲು ಸಾಧ್ಯವಾಗುತ್ತದೆ.