ಫೆಬ್ರವರಿ ಮೊದಲ ವಾರದಲ್ಲಿ ಅರ್ಜನನ ಸ್ಮಾರಕ ಉದ್ಘಾಟನೆ: ಸಚಿವ ಖಂಡ್ರೆ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

2023ರ ಡಿ.4ರಂದು ಹಾಸನ ಜಿಲ್ಲೆ, ಯಸಳೂರು ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಹುತಾತ್ಮನಾದ ದಸರಾ ಅಂಬಾರಿ ಹೊರುತ್ತಿದ್ದ ಗಜಶ್ರೇಷ್ಠ ಅರ್ಜುನನ ಸ್ಮಾರಕವನ್ನು ಫೆಬ್ರವರಿ ಮೊದಲ ವಾರ ಉದ್ಘಾಟಿಸುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ.

ವಿಧಾನಸೌಧದಲ್ಲಿಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಖಾಮುಖಿರಹಿತ ಪ್ರಮಾಣಪತ್ರ ನೀಡಿಕೆ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ಹುತಾತ್ಮ ಅರ್ಜುನನ ಸ್ಮಾರಕ ಸಂಪೂರ್ಣ ಸಿದ್ಧವಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚಿಸಿ ಫೆಬ್ರವರಿ ಮೊದಲ ವಾರದಲ್ಲಿ ಉದ್ಘಾಟಿಸಲಾಗುವುದು ಎಂದರು.

ಹುತಾತ್ಮ ಅರ್ಜುನನ ಸ್ಮಾರಕವನ್ನು ಡಿ.4ರ ಪ್ರಥಮ ಪುಣ್ಯ ತಿಥಿಯೊಳಗಾಗಿ ನೆರವೇರಿಸುವ ಉದ್ದೇಶ ಇತ್ತು. ಆದರೆ, ತಾಂತ್ರಿಕ ಕಾರಣಗಳಿಂದ ತಡವಾಗಿದೆ. ಸ್ಮಾರಕ ಅರಣ್ಯ ಪ್ರದೇಶದಲ್ಲಿದ್ದು, ಸಾರ್ವಜನಿಕರು ಸ್ಮಾರಕ ದರ್ಶನಕ್ಕೆ ಬರಲು ತೊಡಕಾಗದ ರೀತಿಯಲ್ಲಿ ಕ್ರಮ ವಹಿಸಲಾಗುವುದು ಎಂದರು.

ಕಾಕನಕೋಟೆಯಲ್ಲಿ 1968ರಲ್ಲಿ ನಡೆದ ಖೆಡ್ಡ ಕಾರ್ಯಾಚರಣೆಯಲ್ಲಿ ಸೆರೆಹಿಡಿಯಲಾಗಿದ್ದ ಅರ್ಜುನ ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿರುವ ಬಳ್ಳೆ ಆನೆ ಶಿಬಿರದಲ್ಲಿದ್ದ ಹಿನ್ನೆಲೆಯಲ್ಲಿ ಬಳ್ಳೆಯಲ್ಲಿ ಕೂಡ ಸ್ಮಾರಕ ನಿರ್ಮಿಸಲಾಗಿದ್ದು, ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಮೊದಲವಾರದಲ್ಲಿ ಆ ಸ್ಮಾರಕವನ್ನೂ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!