February 18, 2026
Wednesday, February 18, 2026
spot_img

ಅರ್ಜುನ್ ಜನ್ಯ ಮ್ಯಾಜಿಕ್, ಮೂವರು ದಿಗ್ಗಜರ ಜುಗಲ್ಬಂದಿ: Zee ಕನ್ನಡದಲ್ಲಿ ’45’ ಚಿತ್ರದ ಗ್ರ್ಯಾಂಡ್ ಪ್ರೀಮಿಯರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಿರುತೆರೆಯ ಅಚ್ಚುಮೆಚ್ಚಿನ ವಾಹಿನಿ ಜೀ಼ ಕನ್ನಡ, ತನ್ನ ವೀಕ್ಷಕರಿಗೆ ಮತ್ತೊಂದು ಭರ್ಜರಿ ಮನರಂಜನೆಯ ಉಡುಗೊರೆ ನೀಡಲು ಸಜ್ಜಾಗಿದೆ. ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ಪ್ರತಿಭಾವಂತ ನಟ ರಾಜ್ ಬಿ. ಶೆಟ್ಟಿ ಅವರು ಮೊದಲ ಬಾರಿಗೆ ಜೊತೆಯಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ‘45’ ಇದೇ ಫೆಬ್ರವರಿ 22 ರಂದು ಸಂಜೆ 4:30 ಕ್ಕೆ ನೇರವಾಗಿ ನಿಮ್ಮ ಮನೆಮಂದಿಯ ಮುಂದೆ ಪ್ರಸಾರವಾಗಲಿದೆ.

ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರವು ಫ್ಯಾಂಟಸಿ, ಆಕ್ಷನ್ ಮತ್ತು ಭಾವನಾತ್ಮಕ ಅಂಶಗಳ ಸಮ್ಮಿಶ್ರಣವಾಗಿದೆ. ಸುರಜ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಎಂ. ರಮೇಶ್ ರೆಡ್ಡಿ ಅವರು ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಿಸಿದ್ದಾರೆ.

ಚಿತ್ರದ ಕಥೆ ವಿನಯ್ (ರಾಜ್ ಬಿ. ಶೆಟ್ಟಿ) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸುತ್ತ ಸಾಗುತ್ತದೆ. ಅಕಸ್ಮಾತ್ತಾಗಿ ಡಾನ್ ರಾಯಪ್ಪನ (ಉಪೇಂದ್ರ) ಪ್ರೀತಿಯ ನಾಯಿ ‘ರೋಸಿ’ ಸಾವಿಗೆ ವಿನಯ್ ಕಾರಣನಾಗುತ್ತಾನೆ. ಇಲ್ಲಿಂದ ಶುರುವಾಗುವುದೇ ಅಸಲಿ ಆಟ! ಗರುಡ ಪುರಾಣದ ಮರಣಾನಂತರದ ತತ್ವಗಳನ್ನೇ ಮುಂದಿಟ್ಟುಕೊಂಡು ರಾಯಪ್ಪ, ವಿನಯ್‌ಗೆ ತನ್ನ ತಪ್ಪಿನ ಅರಿವಾಗಲು 45 ದಿನಗಳ ಕಾಲಾವಕಾಶ ನೀಡುತ್ತಾನೆ. ಈ ಸಂಕಷ್ಟದ ಸಮಯದಲ್ಲಿ ಮಾರ್ಗದರ್ಶಕನಾಗಿ ಬರುವ ಶಿವಣ್ಣ (ಶಿವರಾಜ್ ಕುಮಾರ್), ವಿನಯ್‌ನನ್ನು ಹೇಗೆ ರಕ್ಷಿಸುತ್ತಾರೆ? 45 ದಿನಗಳ ಕೌಂಟ್‌ಡೌನ್‌ನಲ್ಲಿ ವಿನಯ್ ಬದುಕುಳಿಯುತ್ತಾನಾ? ಎಂಬುದು ಚಿತ್ರದ ರೋಚಕತೆ.

ಪ್ರೀಮಿಯರ್ ಬಗ್ಗೆ ಮಾತನಾಡಿದ ಜೀ಼ ಕನ್ನಡದ ಬಿಸಿನೆಸ್ ಹೆಡ್ ದೀಪಕ್ ಶ್ರೀರಾಮುಲು ಅವರು, “ಕನ್ನಡ ಚಿತ್ರರಂಗದ ಮೂವರು ದಿಗ್ಗಜರು ಒಂದೇ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ತೂಕ ಹೆಚ್ಚಿಸಿದೆ. ಇದು ಕೇವಲ ಪ್ರೀಮಿಯರ್ ಅಲ್ಲ, ಜೀ಼ ಕನ್ನಡ ವೀಕ್ಷಕರಿಗೆ ಒಂದು ಹಬ್ಬದ ಅನುಭವ ನೀಡಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ, ಅತೀಂದ್ರೀಯ ಅಂಶಗಳು ಹಾಗೂ ಜೀವನದ ಮೌಲ್ಯಗಳನ್ನು ಸಾರುವ ಈ ಚಿತ್ರವನ್ನು ಮಿಸ್ ಮಾಡದೆ ವೀಕ್ಷಿಸಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !