ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಾಖಂಡದ ರುದ್ರಪ್ರಯಾಗದ ನಾಗಸರ ಗುರುದ್ವಾರಕ್ಕೆ ಶಸ್ತ್ರಸಜ್ಜಿತ ಗುಂಪೊಂದು ನುಗ್ಗಿದ್ದು, ಭಕ್ತರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ.
ಈಟಿ, ಕತ್ತಿ, ಕೊಡಲಿಗಳೊಂದಿಗೆ ನುಗ್ಗಿದ ಆರು ಜನರ ಶಸ್ತ್ರಸಜ್ಜಿತ ನಿಹಾಂಗ್ ಸಿಖ್ಖರ ಗುಂಪೊಂದು, ವೃದ್ಧ ಸಿಖ್ ಭಕ್ತರೊಬ್ಬರನ್ನು ಮೂರನೇ ಮಹಡಿಯ ಛಾವಣಿ ಮೇಲೆ ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ. ಸ್ಥಳಕ್ಕೆ ಉನ್ನತ ಅಧಿಕಾರಿಗಳು ಆಗಮಿಸಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ.
ತಮ್ಮ ಪ್ರತಿಭಟನಾಕಾರರಿಗೆ ತಂಗಲು ಸ್ಥಳ ಬೇಕು. ಗುರುದ್ವಾರದಲ್ಲಿ 60 ಕೊಠಡಿಗಳನ್ನು ಕೊಡಬೇಕು ಎಂದು ಗುಂಪು ಬೇಡಿಕೆ ಇಟ್ಟಿದೆ. ಆದರೆ ಗುರುದ್ವಾರದ ವ್ಯವಸ್ಥಾಪಕ ಬಿಯಾಂತ್ ಸಿಂಗ್ ಅಷ್ಟೊಂದು ಕೊಠಡಿಗಳ ವ್ಯವಸ್ಥೆ ಕಷ್ಟ ಎಂದು ಹೇಳಿದ್ದಕ್ಕೆ ಹಿಂಸಾಚಾರ ಆರಂಭವಾಗಿದೆ.
ಜೂನ್ 16 ರಂದು ಚಮೋಲಿಯ ಕರ್ಣಪ್ರಯಾಗ ಮಾರುಕಟ್ಟೆಯಲ್ಲಿ ವಾಹನ ನಿಲುಗಡೆ (ಪಾರ್ಕಿಂಗ್) ವಿಚಾರವಾಗಿ ಸ್ಥಳೀಯರು ಮತ್ತು ನಿಹಾಂಗ್ ಯಾತ್ರಿಕರ ನಡುವೆ ಭೀಕರ ತಲವಾರ್ ದಾಳಿ ನಡೆದಿತ್ತು. ನಾಲ್ವರು ಸ್ಥಳೀಯರು ಗಾಯಗೊಂಡಿದ್ದ ಈ ಘಟನೆಯಲ್ಲಿ ಪೊಲೀಸರು ಪಂಜಾಬ್‌ನ ನಾಲ್ವರು ನಿಹಾಂಗ್‌ಗಳನ್ನು ಬಂಧಿಸಿದ್ದರು. ಈಗ ಈ ನಾಲ್ವರನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ಒತ್ತೆಯಾಳು ಸಂಚು ರೂಪಿಸಲಾಗಿದೆ.
ಇದೀಗ ಆರು ಮಂದಿ ನಿಹಾಂಗ್‌ಗಳು ಮೂರನೇ ಮಹಡಿಯ ಪ್ರವೇಶ ದ್ವಾರಕ್ಕೆ ನುಗ್ಗಿ ಒಳಗಿನಿಂದ ಬೀಗ ಹಾಕಿಕೊಂಡಿದ್ದಾರೆ. ಭಕ್ತರನ್ನು ಜೊತೆಗೆ ಇಟ್ಟುಕೊಂಡು ಘೋಷಣೆಗಳನ್ನು ಕೂಗುತ್ತಿದ್ದಾರೆ. ಒತ್ತೆಯಾಳಾಗಿರುವ ಜನರ ಕುಟುಂಬದವರು ಸ್ಥಳಕ್ಕೆ ಧಾವಿಸಿದ್ದು, ತಮ್ಮವರನ್ನು ಬಿಡಿಸುವಂತೆ ಮನವಿ ಮಾಡಿದ್ದಾರೆ. ಸದ್ಯ ಪೊಲೀಸರು ಹಾಗೂ ನಿಹಾಂಗ್‌ಗಳ ಮಧ್ಯೆ ಮಾತುಕತೆ ನಡೆಯುತ್ತಿದೆ.



