ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಂಗ್ಲಾದೇಶದಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ಸರ್ಕಾರ ಪದಚ್ಯುತಿಗೊಂಡ ಬಳಿಕ ಇದೀಗ ಹಂಗಾಮಿ ಸರ್ಕಾರದ ನೇತೃತ್ವ ವಹಿಸಿರುವ ಮೊಹಮ್ಮದ್ ಯೂನಸ್ ವಿರುದ್ಧವೂ ದಂಗೆ ಶುರುವಾಗಿದೆ.
ಹೀಗಾಗಿ ಬಾಂಗ್ಲಾದೇಶದ ಸೇನೆ ತುರ್ತು ಸಭೆ ನಡೆಸಿದ್ದು, ದೇಶದಲ್ಲಿ ಮಿಲಿಟರಿ ಆಳ್ವಿಕೆ ಆರಂಭವಾಗುತ್ತಾ ಎಂಬ ಆತಂಕ ಎದುರಾಗಿದೆ.
ಸೇನಾ ಮುಖ್ಯಸ್ಥ ವಾಕರ್-ಉಜ್-ಜಮಾನ್ ನೇತೃತ್ವದಲ್ಲಿ ಸೇನೆಯು ತುರ್ತು ಸಭೆ ನಡೆಸಿತ್ತು. ಸಭೆಯಲ್ಲಿ ಐವರು ಲೆಫ್ಟಿನೆಂಟ್ ಜನರಲ್‌ಗಳು, ಎಂಟು ಮೇಜರ್ ಜನರಲ್‌ಗಳು(GOC), ಸ್ವತಂತ್ರ ಬ್ರಿಗೇಡ್‌ಗಳ ಕಮಾಂಡಿಂಗ್ ಅಧಿಕಾರಿಗಳು ಮತ್ತು ಸೇನಾ ಪ್ರಧಾನ ಕಚೇರಿಯ ಅಧಿಕಾರಿಗಳು ಸೇರಿದಂತೆ ಉನ್ನತ ಸೇನಾ ಅಧಿಕಾರಿಗಳು ಭಾಗವಹಿಸಿದ್ದರು.
ಸಭೆ ಬೆನ್ನಲ್ಲೇ ದೇಶದಲ್ಲಿ ಯೂನಸ್ ವಿರುದ್ಧ ದಂಗೆ ಭುಗಿಲೆದ್ದು, ತುರ್ತು ಪರಿಸ್ಥಿತಿ ಘೋಷಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಜಾಪ್ರಭುತ್ವ ಆಳ್ವಿಕೆಗೆ ಸಂಪೂರ್ಣವಾಗಿ ಕೊನೆಗೊಳಿಸಿ ಸೇನೆಯೇ ದೇಶದ ಆಡಳಿತ ಕೈಗೆತ್ತಿಕೊಳ್ಳುವ ಆತಂಕ ಸೃಷ್ಟಿಯಾಗಿದೆ. ವಿವಿಧ ರಾಜಕೀಯ ಪಕ್ಷಗಳು ಮತ್ತು ವಿದ್ಯಾರ್ಥಿ ಮುಖಂಡರು ಸೈನ್ಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಇದು ಸೇನೆಯ ಅಸಮಾಧಾನಕ್ಕೆ ಕಾರಣವಾಗಿದೆ ಮತ್ತು ಈ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಒಂದು ದೊಡ್ಡ ಮಟ್ಟದ ಯೋಜನೆಯನ್ನೇ ಸೇನೆ ರೂಪಿಸುತ್ತಿದೆ ಎನ್ನಲಾಗಿದೆ. ಸರಣಿ ಪ್ರತಿಭಟನಾ ಮೆರವಣಿಗೆಗಳ ನಂತರ ಬಾಂಗ್ಲಾದೇಶ ಸೇನೆಯು ದೇಶಾದ್ಯಂತ ತನ್ನ ಸೇನಾ ಕಾರ್ಯಾಚರಣೆಯನ್ನು ಚುರುಕುಗೊಳಿಸುತ್ತಿದೆ.