ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಾಹ್ನದ ಬಿಸಿಯೂಟ ಸೇವಿಸಿ ಐವತ್ತಕ್ಕೂ ಹೆಚ್ಚು ಶಾಲಾ ಮಕ್ಕಳು ಆಸ್ಪತ್ರೆ ಪಾಲಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ನಿನ್ನೆ ಮಧ್ಯಾಹ್ನ (ಸೆಪ್ಟೆಂಬರ್ 12)ರಂದು ಸೀತಾಮರ್ಹಿ ಜಿಲ್ಲೆಯ ಡುಮ್ರಾ ಬ್ಲಾಕ್‌ನಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟವನ್ನು ಸೇವಿಸಿದ ನಂತರ ಸುಮಾರು 50ಕ್ಕೂ ಹೆಚ್ಚು ಶಾಲಾ ಮಕ್ಕಳು ಹೊಟ್ಟೆ ನೋವು ಮತ್ತು ವಾಂತಿಯಾಗಿ ಒದ್ದಾಡುತ್ತಿದ್ದರು. ಕೂಡಲೇ ಮಕ್ಕಳನ್ನು ಸದರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಪ್ರಸ್ತುತ ಎಲ್ಲಾ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದರ್ ಆಸ್ಪತ್ರೆಯ ಡಾ.ಸುಧಾ ಝಾ ಮಾತನಾಡಿ, “ಮಧ್ಯಾಹ್ನದ ಊಟದಲ್ಲಿ ಊಸರವಲ್ಲಿ ಬಿದ್ದಿದ್ದು, ಮಕ್ಕಳು ಅದೇ ಆಹಾರವನ್ನು ಸೇವಿಸಿದ್ದಾರೆ, ಇಲ್ಲಿ ಎಲ್ಲಾ ಮಕ್ಕಳ ಆರೋಗ್ಯ ಸುಧಾರಿಸಿದ್ದು ಮತ್ತು ಯಾವುದೇ ರೋಗಲಕ್ಷಣಗಳಿಲ್ಲ. ನಾವು ಮಕ್ಕಳ ಆರೋಗ್ಯದ ಮೇಲೆ ಇನ್ನೂ ನಿಗಾ ಇರಿಸಿದ್ದೇವೆ. ಈಗ ಎಲ್ಲವೂ ಯಥಾಸ್ಥಿತಿಯಲ್ಲಿದೆ. ಅವರ ತಂದೆ-ತಾಯಿಯೂ ಜೊತೆಗಿದ್ದಾರೆ. ಆತಂಕಪಡುವಂಥದ್ದೇನೂ ಇಲ್ಲ ಎಂದರು.