ಹೊಸದಿಗಂತ ವರದಿ, ಮಂಗಳೂರು:
ಅಕ್ರಮವಾಗಿ ಭಾರತ ಪ್ರವೇಶಿಸಿ ಉಡುಪಿ ಜಿಲ್ಲೆಯ ಮಲ್ಪೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಎಂಟು ಮಂದಿ ಬಾಂಗ್ಲಾ ಪ್ರಜೆಗಳು ಸೇರಿದಂತೆ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.
ಬಾಂಗ್ಲಾದೇಶದ ಪ್ರಜೆಗಳಾದ ಮೊಹಮ್ಮದ್ ಮಾಣಿಕ್ ಹುಸೈನ್ (26) ಹಕೀಮ್ ಅಲಿ (24 ), ಫಾರೂಕ್ (19), ಇಸ್ಮಾಯಿಲ್ (30), ಕರೀಮ್ (22), ಸಲಾಂ ಎಸ್.ಕೆ (28), ರಾಜಿಕುಲ್ (20), ಮೊಹಮ್ಮದ್ ಸೋಜಿಬ್ (20) ಬಂದಿತರು ಇವರ ಜೊತೆಗೆ ಇವರನ್ನು ಕರೆತರಲು ನೆರವು ನೀಡಿದ್ದ ಕಾಜೋಲ್ ಮತ್ತು ಉಸ್ಮಾನ್ ಎಂಬವರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಬೆಳಕಿಗೆ ಬಂದದ್ದು ಹೇಗೆ?
ಪಶ್ಚಿಮ ಬಂಗಾಳದ ಗಡಿ ಮೂಲಕ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ್ದ ಮೊಹಮ್ಮದ್ ಮಾಣಿಕ್ ಹುಸೈನ್(26) ಕಳೆದ ಐದು ವರ್ಷಗಳಿಂದ ಉಡುಪಿಯ ಗುಜ್ಜರಬೆಟ್ಟುವಿನಲ್ಲಿ ವಾಸವಾಗಿದ್ದ. ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಈತ ನಕಲಿ ವಿಳಾಸ ನೀಡಿ ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದ. ಶನಿವಾರ ದುಬೈಗೆ ತೆರಳಲು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಆದರೆ ಇಮಿಗ್ರೇಷನ್ ಅಕಾರಿಗಳ ತಪಾಸಣೆ ವೇಳೆ ಈತ ಬಾಂಗ್ಲಾ ನಿವಾಸಿ ಎಂಬುದು ದೃಢಪಟ್ಟಿದೆ. ಈತ ನೀಡಿದ ಮಾಹಿತಿಯಂತೆ ಉಡುಪಿಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಇತರೆ 9 ಮಂದಿಯನ್ನು ಬಂಧಿಸಿದ್ದಾರೆ.
ವಿಮಾನ ನಿಲ್ದಾಣ ಅಧಿಕಾರಿಗಳು ನೀಡಿದ ದೂರಿನ ಆಧಾರದಲ್ಲಿ ಬಜಪೆ ಠಾಣೆಯಲ್ಲಿ ಮೊಹಮ್ಮದ್ ಮಾಣಿಕ್ ಹುಸೈನ್ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ನಕಲಿ ವಿಳಾಸ ನೀಡಿ ಆಧಾರ್ ಕಾಡ್
ಮೊಹಮ್ಮದ್ ಮಾಣಿಕ್ ಹುಸೈನ್ ನೀಡಿದ ಮಾಹಿತಿಯಂತೆ ಮಲ್ಪೆ ಸಮೀಪದ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಏಳು ಮಂದಿ ಬಾಂಗ್ಲಾದೇಶಿಯರು ಸೇರಿದಂತೆ ಒಟ್ಟು 9 ಮಂದಿಯನ್ನು ಮಲ್ಪೆ ಪೊಲಿಸರು ಬಂಧಿಸಿದ್ದಾರೆ. ಬಾಂಗ್ಲಾದೇಶದಿಂದ ಉಡುಪಿ ತಾಲೂಕು ಪಡುತೋನ್ಸೆ ಗ್ರಾಮದ ಹೂಡೆಗೆ ಬಂದು, ನಕಲಿ ವೀಳಾಸ ನೀಡಿ ಈ ಆರೋಪಿಗಳು ಆಧಾರ್ ಕಾರ್ಡ್ ಪಡೆದುಕೊಂಡಿದ್ದರು. ಈ ಆರೋಪಿಗಳು ಸುಮಾರು 3 ವರ್ಷಗಳಿಂದ ಇಲ್ಲಿ ವಾಸವಿರುವುದು ದೃಢಪಟ್ಟಿದೆ.
ಆರೋಪಿಗಳ ಪೈಕಿ ಸಿಕ್ಕಿಂ ಅಗರ್ತಲಾದ ಕಾಜೋಲ್ ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿದವ. ಆರೋಪಿಗಳ ಪೈಕಿ ಉಸ್ಮಾನ್ ಅಕ್ರಮವಾಗಿ ಕರೆತಂದು ಉದ್ಯೋಗಕ್ಕೆ ವ್ಯವಸ್ಥೆ ಮಾಡಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಮಲ್ಪೆ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ ವಿವರಿಸಿದ್ದಾರೆ. ಅಕ್ರಮವಾಗಿ ಭಾರತಕ್ಕೆ ಬಂದಿದ್ದ ಈ ಆರೋಪಿಗಳು ಉಡುಪಿಯಲ್ಲಿ ಮೀನುಗಾರಿಕಾ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿದ್ದರು.