ಹೊಸದಿಗಂತ ವರದಿ ಮಡಿಕೇರಿ:
ಕರಿಮೆಣಸು ಕಳವು ಪ್ರಕರಣವೊಂದನ್ನು ಪತ್ತೆ ಮಾಡಿರುವ ಕುಶಾಲನಗರ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿ ಅವರಿಂದ ಕರಿಮೆಣಸು, ನಗದು ಹಾಗೂ ಒಂದು ಜೀಪನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಭೂತನಹಳ್ಳಿ ನಿವಾಸಿ ಮೂರ್ತಿ, ಪಿರಿಯಾಪಟ್ಟಣ ತಾಲೂಕಿನ ತರಿಕಲ್ಲು ಗ್ರಾಮದ ಕುಮಾರ, ಹರೀಶ, ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದ ಚಂದ್ರಶೇಖರ್ ಮತ್ತು ಮೂಲತಃ ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ವಾಸಿ ಹಾಲಿ ಇದೇ ಕಾಫಿ ತೋಟದಲ್ಲಿ ಕೆಲಸ ಮಾಡಿಕೊಂಡಿರುವ ಎಂ.ಸಿ.ಕಾಳಪ್ಪ ಎಂಬವರೇ ಬಂಧಿತ ಆರೋಪಿಗಳು.
ಅವರಿಂದ 800 ಕೆ.ಜಿ. ಕರಿಮೆಣಸು, ರೂ.1.67 ಲಕ್ಷ ರೂ. ನಗದು ಹಾಗೂ ಕಳವಿಗೆ ಉಪಯೋಗಿಸಿದ ಒಂದು ಮಹೀಂದ್ರಾ ಜೀಪನ್ನು ವಶಪಡಿಸಿಕೊಂಡು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಮಹಾಲಕ್ಷ್ಮಿ ಎಸ್ಟೇಟ್ ಎಂಬ ಕಾಫಿ ತೋಟವೊಂದರ ತೋಟದ ಮನೆಯಿಂದ ಅ. 17ರಿಂದ 19ರ ನಡುವೆ ಸುಮಾರು ರೂ.4ಲಕ್ಷ ಮೌಲ್ಯದ 800 ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ಅಪಹರಿಸಿದ್ದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ.ಅಯ್ಯಪ್ಪ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಆರ್.ವಿ. ಗಂಗಾಧರಪ್ಪ ಅವರ ಉಸ್ತುವಾರಿಯಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಅವರ ನೇತೃತ್ವದ ಅಪರಾಧ ಪತ್ತೆ ತಂಡವು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.