ಸಿಸ್ಟರ್ ಪ್ರಭಾರನ್ನು ಬಂಧಿಸಿ, ಪೊಲೀಸರನ್ನು ಅಮಾನತು ಮಾಡಿ: ಆರ್.ಅಶೋಕ್ ಆಗ್ರಹ

ಹೊಸದಿಗಂತ ವರದಿ,ಶಿರಸಿ:

ಮಂಗಳೂರಿನ ಜೆರೋಸಾ ಶಾಲೆಯ ಸಿಸ್ಟರ್ ಪ್ರಭ ಅವರನ್ನು ಬಂಧಿಸಬೇಕು. ಬಿಜೆಪಿ ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ವಿಧಾನಸಭಾ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಶಾಲೆಯಲ್ಲಿ ಸಿಸ್ಟರ್ ಪ್ರಭ ಅವರು, ಅಯೋಧ್ಯೆಯ ರಾಮ ಮಂದಿರ ಮಸೀದಿಯನ್ನು ಒಡೆದು ಕಟ್ಟಿದ್ದಾರೆ, ಕಲ್ಲಿನ ಕಟ್ಟಡ ನಿರ್ಮಿಸಿದ್ದಾರೆ, ಬಳೆ ತೊಡುವುದರಲ್ಲಿ ಪವಿತ್ರತೆ ಇಲ್ಲ ಎಂದೆಲ್ಲ ಶಾಲಾ ಮಕ್ಕಳಿಗೆ ಹೇಳಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಈ ಮೂಲಕ ಮಕ್ಕಳನ್ನು ಮತಾಂತರಗೊಳಿಸುವ ಪ್ರಯತ್ನ ನಡೆದಿದೆ. ಈ ಕುರಿತು ಮಕ್ಕಳು ಪೋಷಕರ ಬಳಿ ಹೇಳಿಕೊಂಡಿದ್ದಾರೆ. ಹಿಂದು ದೇವರು ಹಾಗೂ ಆಚರಣೆಗಳ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿರುವುದರಿಂದ ಶಾಸಕ ಭರತ್ ಶೆಟ್ಟಿ ಶಾಲೆಗೆ ಹೋಗಿ ದೂರು ನೀಡಿದ್ದಾರೆ ಎಂದರು.

ಈಗ ಯಾರೋ ವ್ಯಕ್ತಿ ಬಿಜೆಪಿಯ ಇಬ್ಬರು ಶಾಸಕರ ಮೇಲೆ ದೊಡ್ಡ ಪ್ರಕರಣ ದಾಖಲಿಸಿದ್ದಾರೆ. ಶಾಸಕ ಭರತ್ ಶೆಟ್ಟಿ ಸ್ಥಳದಲ್ಲೇ ಇಲ್ಲದಿದ್ದರೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಗೃಹ ಸಚಿವರು ಹೇಳುವಂತೆ, ದೂರು ಬಂದಿರುವುದರಿಂದ ಎಫ್ಐಆರ್ ದಾಖಲಾಗಿದೆ. ಇದಕ್ಕೂ ಎರಡು-ಮೂರು ದಿನಗಳ ಮುನ್ನವೇ ಪೋಷಕರು ದೂರು ನೀಡಿದ್ದರೂ ಅದು ದಾಖಲಾಗಿಲ್ಲ. ಆ ದೂರಿನ ಬಗ್ಗೆ ಪೊಲೀಸರು ಕ್ಯಾರೇ ಎನ್ನಲಿಲ್ಲ. ಕೋಮುಗಲಭೆ, ಪ್ರಧಾನಿಯವರನ್ನು ಹೀಯಾಳಿಸಿರುವುದಕ್ಕೆ ಯಾವುದೇ ಸೆಕ್ಷನ್ ದಾಖಲಿಸಿಲ್ಲ. ಆ ದೂರು ಬಾಕಿ ಇಟ್ಟು, ಒತ್ತಡದಿಂದ ಶಾಸಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗ ಕರ್ನಾಟಕ ಪೊಲೀಸರ ಗೂಂಡಾಗಿರಿ ಹಾಗೂ ದೌರ್ಜನ್ಯದ ರಾಜ್ಯವಾಗಿದೆ. ನಾನು ಹುಬ್ಬಳ್ಳಿಗೆ ಹೋದಾಗಲೂ ಅವಾಚ್ಯ ಪದ ಬಳಸಿದ್ದೇನೆಂದು ಪ್ರಕರಣ ದಾಖಲಾಗಿದೆ. ಕೂಡಲೇ ಸಿಸ್ಟರ್ ಪ್ರಭ ಅವರ ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಬೇಕು. ಶಾಸಕರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!