June 27, 2026
Saturday, June 27, 2026
spot_img

ಸೌಜನ್ಯ ಮಾವ ವಿಠ್ಠಲ್ ಗೌಡಗೆ ಬಂಧನ ವಾರಂಟ್: ಬೆಳ್ತಂಗಡಿಯಲ್ಲಿ ಕೋರ್ಟ್ ಅಧಿಕಾರಿಗಳು, ಪೊಲೀಸರಿಂದ ಜಂಟಿ ಶೋಧ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:


ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿನ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆ ನೀಡದಂತೆ ನ್ಯಾಯಾಲಯವು ನೀಡಿದ್ದ ಈ ಹಿಂದಿನ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದ ಹಿನ್ನೆಲೆಯಲ್ಲಿ ಸೌಜನ್ಯಾ ಪ್ರಕರಣದ ಹೋರಾಟಗಾರ, ಸೌಜನ್ಯ ಸಂಬಂಧಿ ವಿಠ್ಠಲ್ ಗೌಡ ವಿರುದ್ಧ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಲು ಕೋರ್ಟ್ ಅಧಿಕಾರಿಗಳು ಬೆಳ್ತಂಗಡಿಗೆ ಆಗಮಿಸಿದ್ದಾರೆ.


ಮೂಲಗಳ ಮಾಹಿತಿ ಪ್ರಕಾರ ನ್ಯಾಯಾಲಯವು ಜೂ.೮ರಂದು ಈ ಆದೇಶ ಹೊರಡಿಸಿದ್ದು, ಜೂ.೩೦ರ ಒಳಗಾಗಿ ವಿಠ್ಠಲ್ ಗೌಡ ಬಂಧನಕ್ಕೆ ಆದೇಶಿಸಿದೆ. ವಾರಂಟ್ ಜಾರಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಠ್ಠಲ್ ಗೌಡ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಿದ್ದು, ಅವರು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೋಲೀಸರ ನೆರವಿನೊಂದಿಗೆ ಅವರ ಮನೆ, ಸೌಜನ್ಯಳ ಮನೆ ಸಹಿತ ವಿವಿಧ ಕಡೆಗಳಲ್ಲಿ ಶೋಧಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ:


ಈ ಹಿಂದೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸಂಬಂಧಿತ ಸಂಸ್ಥೆಗಳ ಪರವಾಗಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ, ಧರ್ಮಸ್ಥಳ ಸಂಸ್ಥೆಗಳು ಹಾಗೂ ಧರ್ಮಾಧಿಕಾರಿಗಳ ವಿರುದ್ಧ ಸಾರ್ವಜನಿಕವಾಗಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ, ಮಾನಹಾನಿಕರ ಅಥವಾ ಸುಳ್ಳು ಆರೋಪಗಳನ್ನು ಮಾಡುವುದನ್ನು ತಡೆಯುವಂತೆ ಈ ಹಿಂದೆ ಆದೇಶಿಸಿತ್ತು. ಆದರೆ, ನ್ಯಾಯಾಲಯದ ಆದೇಶ ಜಾರಿಯಲ್ಲಿದ್ದರೂ ವಿಠ್ಠಲ್ ಗೌಡ ಅವರು ವಿವಿಧ ವೇದಿಕೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ತಡೆಯಾಜ್ಞೆಗೆ ವಿರುದ್ಧವಾದ ಹೇಳಿಕೆಗಳನ್ನು ನೀಡಿರುವುದಾಗಿ ಅರ್ಜಿಯಲ್ಲಿ ಆರೋಪಿಸಲಾಗಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯವು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !