ಹೊಸದಿಗಂತ ವರದಿ ಮಡಿಕೇರಿ:
ಚಿನ್ನಾಭರಣಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ಅಸಲಿ ಚಿನ್ನಾಭರಣಗಳ ಬದಲಿಗೆ ನಕಲಿ ಆಭರಣಗಳನ್ನು ಬದಲಾಯಿಸಿ ಮೋಸ ಮಾಡಿದ್ದ ಇಬ್ಬರು ಮಹಿಳೆಯರನ್ನು ಕುಶಾಲನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಚಿತ್ರದುರ್ಗ ಜಿಲ್ಲೆಯ ಭರಮಸಾಗರದ ಪಾಮರಹಳ್ಳಿ ಗ್ರಾಮದ ವಾಸಿಗಳಾದ ಕೈರುನ್ (46) ಹಾಗೂ ಜೈರಾಭಿ (36) ಎಂದು ಗುರುತಿಸಲಾಗಿದ್ದು, ಅವರಿಂದ 22.34 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕುಶಾಲನಗರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಥಬೀದಿಯಲ್ಲಿರುವ ಶೀತಲ್ ಜ್ಯುವೆಲ್ಲರಿಗೆ ಜೂ.5ರಂದು ಬಂದ ಇಬ್ಬರು ಬುರ್ಖಾಧಾರಿ ಹೆಂಗಸರು ಮತ್ತು ಒಬ್ಬ ಯುವಕ, ಚಿನ್ನಾಭರಣಗಳನ್ನು ಖರೀದಿಸುವ ನೆಪದಲ್ಲಿ ಅಂಗಡಿಯವರ ಗಮನವನ್ನು ಬೇರೆಡೆ ಸೆಳೆದು ಸುಮಾರು 22.4 ಗ್ರಾಂ ತೂಕದ ಚಿನ್ನಾಭರಣಗಳ ಬದಲಿಗೆ ನಕಲಿ ಆಭರಣಗಳನ್ನು ಬದಲಾಯಿಸಿ ಮೋಸ ಮಾಡಿ ನಾಪತ್ತೆಯಾಗಿದ್ದರು.
ಆರೋಪಿಗಳ ಪತ್ತೆಗಾಗಿ ಸೋಮವಾರಪೇಟೆ ಡಿವೈಎಸ್ ಪಿ ಆರ್.ವಿ.ಗಂಗಾಧರಪ್ಪ,ಕುಶಾಲನಗರ ವೃತ್ತದ ಇನ್ಸ್ಪೆಕ್ಟರ್ ಬಿ.ಜಿ.ಮಹೇಶ್, ನಗರ ಠಾಣಾಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು.
ಈ ತಂಡ ಜು.5ರಂದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಅವರಿಂದ ಮಾಲು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಅವರು ಶ್ಲಾಘಿಸಿದ್ದಾರೆ. ಅಲ್ಲದೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಜಿಲ್ಲಾ ಪೊಲೀಸ್ ಅಥವಾ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಅಕ್ರಮ ಚಟುವಟುಕೆಗಳ ಕುರಿತು ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.