ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್​ ಸರಕಾರದ ಕಿಡಿಗೇಡಿತನದ ಪರಮಾವಧಿ: ಹೆಚ್‌.ಡಿ ಕುಮಾರಸ್ವಾಮಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದ್ದು, ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದರ ಕುರಿತು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು, ಇದೆಂಥಾ ಚೋದ್ಯ? ಒಂದು ಕಡೆ ಮೇಕೆದಾಟು ಬೇಕು ಎಂದು ಪಾದಯಾತ್ರೆ ಮಾಡಿದವರನ್ನು, ಕಾವೇರಿಗಾಗಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದ ರೈತರನ್ನು, ಹೋರಾಟಗಾರರನ್ನು ಬಂಧಿಸಿದ್ದಾರೆ. ರಾತ್ರೋರಾತ್ರಿ ಹೋರಾಟಗಾರರನ್ನು ಬಂಧಿಸಿರುವುದು ಕಾಂಗ್ರೆಸ್​ ಸರಕಾರದ ಕಿಡಿಗೇಡಿತನದ ಪರಮಾವಧಿ. ಕರ್ನಾಟಕದಲ್ಲಿ ಕಾಂಗ್ರೆಸ್ಸಿಗರಿಗೆ ಒಂದು ನ್ಯಾಯ, ಕನ್ನಡಿಗರಿಗೆ ಇನ್ನೊಂದು ನ್ಯಾಯ ಎನ್ನುವುದು ಇದೆಯಾ?” ಎಂದು ವಾಗ್ದಾಳಿ ಮಾಡಿದ್ದಾರೆ.

ಕೋವಿಡ್ ನಿಯಮ ಉಲ್ಲಂಘಿಸಿ ಕಾಂಗ್ರೆಸ್ ನಾಯಕರು ಮೇಕೆದಾಟು ಪಾದಯಾತ್ರೆ ಮಾಡಬಹುದಾದರೆ, ನಾಡಿನ ಜೀವನಾಡಿ ಕಾವೇರಿಗಾಗಿ ಕನ್ನಡಿಗರು ಪ್ರತಿಭಟನೆ ನಡೆಸಬಾರದೇ? ಶಾಂತವಾಗಿ ಹೋರಾಟ ನಡೆಸುತ್ತಿದ್ದ ರೈತರು, ಹೋರಾಟಗರನ್ನು ಬಂಧಿಸಿರುವುದು ಖಂಡನೀಯ ಎಂದು ಹೇಳಿದ್ದಾರೆ.

ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? ಇಷ್ಟಕ್ಕೂ ಕನ್ನಡಿಗರು ಮತ ಹಾಕಿದ್ದು ಯಾರಿಗೆ? ಎಂದು ಪ್ರಶ್ನಿಸಿದ್ದಾರೆ.

ಹೋರಾಟಗಾರರು, ರೈತರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು. ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ಡಿಎಂಕೆ ಪಕ್ಷದ ಬಿ ಟೀಂ ಆಗಿ ಪರಿವರ್ತನೆ ಆದ ಪರಿಣಾಮವೇ ಈ ಕಾವೇರಿ ಬಿಕ್ಕಟ್ಟು ಎನ್ನುವುದು ಕನ್ನಡಿಗರಿಗೆ ಈಗ ಸ್ಪಷ್ಟವಾಗಿ ಅರ್ಥವಾಗಿದೆ ಎಂದಿದ್ದಾರೆ.

ಕಾವೇರಿ ನೀರಿಗಾಗಿ ನಡೆಯುತ್ತಿರುವ ಬೆಂಗಳೂರು ಬಂದ್​​ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಅವರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here