ಕಾರವಾರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ ರೈಲಿಗೆ ಗಣ್ಯರಿಂದ ಸ್ವಾಗತ

ಹೊಸ ದಿಗಂತ ವರದಿ, ಕಾರವಾರ:

ಭಾರತೀಯ ರೈಲ್ವೆ ಇಲಾಖೆಯ ಅತಿ ವೇಗ ಸುಸಜ್ಜಿತ ರೈಲು ಎನಿಸಿರುವ ವಂದೇ ಭಾರತ ರೈಲು ಮಂಗಳೂರಿನಿಂದ ಮಡಗಾವ್ ಗೆ ಓಡಾಟ ಆರಂಭಿಸಿದ್ದು ಜಿಲ್ಲಾ ಕೇಂದ್ರ ಕಾರವಾರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ವಂದೇ ಭಾರತ ರೈಲಿಗೆ ಹರ್ಷೋದ್ಗಾರಗಳೊಂದಿಗೆ ಸ್ವಾಗತ ಕೋರಲಾಯಿತು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್, ಮಾಜಿ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಕಾರವಾರದ ನಾಗರಿಕರು ರೈಲ್ವೆ ನಿಲ್ದಾಣದಲ್ಲಿ ಉಪಸ್ಥಿತರಿದ್ದು ವಂದೇ ಭಾರತ ರೈಲಿಗೆ ಸ್ವಾಗತ ಕೋರಿದರು.

ಕಾರವಾರ ರೈಲ್ವೆ ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಪುಷ್ಪವೃಷ್ಠಿ ಸುರಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಮತ್ತು ಬಿಜೆಪಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಯಕಾರ ಕೂಗಿದರು.

ರೈಲಿಗೆ ಕೈಮುಗಿದು ಒಳಗೆ ಪ್ರವೇಶಿಸಿದ ಶಾಸಕ ಸತೀಶ ಸೈಲ್ ಪ್ರಯಾಣಿಕರಿಗೆ ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಸತೀಶ ಸೈಲ್ ಮಾತನಾಡಿ ವಂದೇ ಭಾರತ ರೈಲು ಕಾರವಾರ ಭಾಗದಲ್ಲಿ ಓಡಾಟ ಆರಂಭಿಸಿದ್ದು ಸಂತಸದ ಸಂಗತಿ ಎಂದರು.

ಮಾಜಿ ಶಾಸಕಿ ರೂಪಾಲಿ ನಾಯ್ಕ ಮಾತನಾಡಿ ಕರಾವಳಿ ಭಾಗದ ಜನರ ಬಹುಕಾಲದ ಕನಸು ನನಸಾಗಿದ್ದು ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವರು ಮತ್ತು ಸಂಸದರಿಗೆ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಾರವಾರ ರೈಲ್ವೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಶಾಸಕ ಸತೀಶ ಸೈಲ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ವಂದೇ ಭಾರತ ಕಾರವಾರದಿಂದ ಮಡಗಾವ್ ಗೆ ಪ್ರಯಾಣ ಬೆಳೆಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!