ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಜಾವೆಲಿನ್ ಥ್ರೋ ಫೈನಲ್ನಲ್ಲಿ ಚಿನ್ನದ ಪದಕವನ್ನು ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೈಬಾದ ನಾಯಕ ಹ್ಯಾರಿಸ್ ಧರ್ ಜತೆ ಕಾಣಿಸಿಕೊಂಡಿದ್ದಾರೆ.ಈ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.
ನದೀಮ್ ಅವರು ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದು ತನ್ನ ದೇಶದ 32 ವರ್ಷಗಳ ಚಿನ್ನದ ಪದಕ ಬರಗಾಲವನ್ನು ಕೊನೆಗೊಳಿಸಿದ್ದರು. ಆದಾಗ್ಯೂ, ವಿಶ್ವ ಸಂಸ್ಥೆಯೇ ಭಯೋತ್ಪಾದಕ ಸಂಘಟನೆ ಎಂದು ಕರೆದಿರುವ ಲಷ್ಕರ್-ಎ-ತೈಬಾದ ನಾಯಕನ ಜತೆ ಕಾಣಿಸಿಕೊಂಡಿರುವುದು ಅಸಮಾಧಾನಕ್ಕೆ ಕಾರಣವಾಗಿದೆ.
ಪ್ಯಾರಿಸ್ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನದೀಮ್ ಅವರಿಗೆ ಭವ್ಯ ಸ್ವಾಗತ ದೊರಕಿದೆ. ಅಲ್ಲಿನ ಸರ್ಕಾರವು ಅವರಿಗೆ ವಿಜಯ ಮೆರವಣಿಗೆಯನ್ನು ಸಹ ಆಯೋಜಿಸಿತ್ತು. ಇದಲ್ಲದೆ, ನದೀಮ್ ಅವರು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಯನ್ನೂ ಪಡೆದಿದ್ದಾರೆ. ದೊಡ್ಡ ಪ್ರಮಾಣದ ಬಹುಮಾನಗಳು ಅವರ ಕಡೆಗೆ ಬರುತ್ತಿದೆ. ಕಾರು, ಹಣ,ಪ್ರಶಸ್ತಿಗಳು ಅವರನ್ನು ಸುತ್ತುವರಿಯುತ್ತಿವೆ. ಆದರೆ ಅವರು ಲಷ್ಕರ್ ನಾಯಕನೊಂದಿಗೆ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ.
ಎಕ್ಸ್ನಲ್ಲಿನ ಒಎಸ್ಐಎನ್ಟಿ (ಓಪನ್ ಸೋರ್ಸ್ ಇಂಟೆಲಿಜೆನ್ಸ್) ಖಾತೆಯು ನದೀಮ್ ಮತ್ತು ದಾರ್ ಸಂಭಾಷಣೆಯ ವೀಡಿಯೊವನ್ನು ಹಂಚಿಕೊಂಡಿದೆ. ವೀಡಿಯೊದಲ್ಲಿ, ದಾರ್ ನದೀಮ್ ಅವರ ಒಲಿಂಪಿಕ್ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದಾನೆ. ಅಲ್ಲದೆ, ನದೀಮ್ ಸಾಧನೆಯು ಮುಸ್ಲಿಂಮರನ್ನು ಹೆಮ್ಮೆಪಡುವಂತೆ ಮಾಡಿದೆ ಎಂದು ಹೇಳಿದ್ದಾನೆ. ದಾರ್ ಅವರ ಹೊಗಳಿಕೆ ಮತ್ತು ಇಬ್ಬರನ್ನು ಒಟ್ಟಿಗೆ ಕಾಣಿಸಿಕೊಂಡಿರುವುದು ನದೀಮ್ ಅವರ ಜಾಗತಿಕ ಮನ್ನಣೆಗೆ ಹಾನಿ ಮಾಡಲಿದೆ.
ಉಗ್ರಗಾಮಿ ಸಂಘಟನೆ
ವಿಶ್ವಸಂಸ್ಥೆಯಿಂದ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಲ್ಪಟ್ಟಿರುವ ಲಷ್ಕರ್-ಎ-ತೈಬಾ ಹಲವಾರು ಹಿಂಸಾಚಾರ ಮತ್ತು ಭಯೋತ್ಪಾದಕ ಕೃತ್ಯಗಳೊಂದಿಗೆ ಸಂಪರ್ಕ ಹೊಂದಿದೆ. ಮಿಲ್ಲಿ ಮುಸ್ಲಿಂ ಲೀಗ್ (ಎಂಎಂಎಲ್) ನಲ್ಲಿ ಜಂಟಿ ಕಾರ್ಯದರ್ಶಿ ಸ್ಥಾನ ಹೊಂದಿರುವ ಮುಹಮ್ಮದ್ ಹ್ಯಾರಿಸ್ ದಾರ್ ಎಲ್ಇಟಿಯೊಂದಿಗೆ ಸಂಪರ್ಕ ಹೊಂದಿದ್ದಾನೆ. ಎಲ್ಇಟಿ ನಾಯಕ ಹಫೀಜ್ ಸಯೀದ್ ಸ್ಥಾಪಿಸಿದ ಎಂಎಂಎಲ್ ಅನ್ನು ಭಯೋತ್ಪಾದಕ ಗುಂಪಿನ ಮುಂಚೂಣಿ ಸಂಘಟನೆ ಎಂದು ಪರಿಗಣಿಸಲಾಗಿದೆ. 166 ಜನರ ಸಾವಿಗೆ ಕಾರಣವಾದ 26/11 ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್.
2018 ರಲ್ಲಿ, ಅಮೆರಿಕ ಎಂಎಂಎಲ್ ಮತ್ತು ಅದರ ನಾಯಕತ್ವವನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿತ್ತು. ಅದರಲ್ಲಿ ಮುಹಮ್ಮದ್ ಹ್ಯಾರಿಸ್ ದಾರ್ ಕೂಡ ಇದ್ದಾನೆ. ಆತ ಎಲ್ಇಟಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.