ಅರ್ಷದೀಪ್, ಅವೇಶ್‌ ಮಾರಕ ದಾಳಿ: ದ.ಆಫ್ರಿಕಾ 116 ರನ್ ಗೆ ಆಲೌಟ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿ ಇಂದಿನಿಂದ ಆರಂಭವಾಗಿದ್ದು, ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್‌ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಭಾರತದ ಬೌಲರ್‌ಗಳ  ದಾಳಿಗೆ ದಕ್ಷಿಣ ಆಫ್ರಿಕಾ ಕೇವಲ 116 ರನ್​ಗಳಿಗೆ ಆಲೌಟ್‌ ಆಯಿತು. ಹೀಗಾಗಿ ಭಾರತದ ಗೆಲುವಿಗೆ 117 ರನ್‌ ಗುರಿ ನೀಡಿದೆ.

ಅರ್ಷದೀಪ್ ಸಿಂಗ್ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಚೊಚ್ಚಲ 5 ವಿಕೆಟ್ ಸಾಧನೆ ಮಾಡಿದರು. ​ಅವೇಶ್ ಖಾನ್ 4 ವಿಕೆಟ್​ ಉರುಳಿಸಿದರು.

ದ.ಆಫ್ರಿಕಾ ನಾಯಕ ಐಡೆನ್ ಮಾರ್ಕ್ರಾಮ್ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಕಣಕ್ಕಿಳಿದ ರೀಜಾ ಹೆಂಡ್ರಿಕ್ಸ್ ಮತ್ತು ಟೋನಿ ಡಿ ಜೋರ್ಜಿ ಜೋಡಿ ಉತ್ತಮ ಆರಂಭ ನೀಡುವಲ್ಲಿ ಎಡವಿದರು. ಅರ್ಷದೀಪ್ ಅವರ ಮೊದಲ ಓವರ್​ನ ನಾಲ್ಕನೇ ಎಸೆತದಲ್ಲೇ ರೀಜಾ ಹೆಂಡ್ರಿಕ್ಸ್ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡರು.​ ಬಳಿಕ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ (0) ಕೂಡ ಅರ್ಷದೀಪ್‌ಗೆ ವಿಕೆಟ್​ ಒಪ್ಪಿಸಿ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದರು.

ಎಡಗೈ ಬ್ಯಾಟರ್ ಜೋರ್ಜಿ ಎರಡು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ ಕೆಲವು ಪವರ್ ಹಿಟ್ಟಿಂಗ್ ಮೂಲಕ ಮಾರ್ಕ್ರಾಮ್‌ರೊಂದಿಗೆ 39 ರನ್ ಜೊತೆಯಾಟವಾಡಿದರು. ಆದರೆ ಮತ್ತೆ ದಾಳಿಗಿಳಿದ ಅರ್ಷದೀಪ್ ಸಿಂಗ್  ಜೋರ್ಜಿ(28) ಅವರನ್ನು ಔಟ್​ ಮಾಡಿದರು. ಹೆನ್ರಿಚ್ ಕ್ಲಾಸೆನ್ (6) ಹಾಗು ನಿಧಾನಗತಿಯಲ್ಲಿ ಬ್ಯಾಟಿಂಗ್​ ಮಾಡುತ್ತಿದ್ದ ಆಂಡಿಲೆ ಫೆಹ್ಲುಕ್ವಾಯೊ (33) ಕೂಡ ವಿಕೆಟ್​ ಚೆಲ್ಲಿದರು.

ಮಾರ್ಕ್ರಾಮ್​ (12), ಡೇವಿಡ್ ಮಿಲ್ಲರ್ (2), ವಿಯಾನ್ ಮುಲ್ಡರ್ (0) ಮತ್ತು ಕೇಶವ್ ಮಹಾರಾಜ್ (4) ವಿಕೆಟ್​ ಪಡೆಯುವ ಮೂಲಕ ಆವೇಶ್ ಖಾನ್ ದ.ಆಫ್ರಿಕಾ ಬ್ಯಾಟಿಂಗ್​ ಬಲ ಮುರಿದರು. ಇನ್ನು ನಾಂದ್ರೆ ಬರ್ಗರ್ (7) ಕುಲದೀಪ್​ ಯಾದವ್​ ಸ್ಪಿನ್​ ಮೋಡಿಗೆ ಬಲಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!