ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಪ್ರಬಲವಾಗುತ್ತಿದೆ. ಪ್ರಬಂಧ ಬರೆಯುವುದರಿಂದ ಹಿಡಿದು ಕೋಡ್ ರಚನೆವರೆಗೆ ಎಐ ಆಧಾರಿತ ಚಾಟ್‌ಬಾಟ್‌ಗಳು (ಚಾಟ್‌ಜಿಪಿಟಿ) ಮನುಷ್ಯನ ಉದ್ಯೋಗಕ್ಕೇ ಕತ್ತರಿ ಹಾಕುತ್ತಿದೆ.
ಇದೀಗ ಕೃತಕ ಬುದ್ಧಿಮತ್ತೆಯಿಂದ ಉದ್ಯೋಗ ಕಡಿತದ ಕುರಿತು ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. ಕೃತಕ ಬುದ್ಧಿಮತ್ತೆಯಿಂದ ಜನರ ಉದ್ಯೋಗಗಳಿಗೆ ಕತ್ತರಿ ಬೀಳುವುದಿಲ್ಲ ಎಂದಿದ್ದಾರೆ.
ಜಗತ್ತಿನಲ್ಲಿ ದೇವರ ಅದ್ಭುತ ಸೃಷ್ಟಿ ಎಂದರೆ ಅದು ಮನುಷ್ಯನ ಮೆದುಳು, ಬುದ್ಧಿಶಕ್ತಿ. 1975ರಲ್ಲೂ ತಂತ್ರಜ್ಞಾನದಲ್ಲಿ ಬದಲಾವಣೆಗಳು ಆದಾಗ ಜನರ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ. ಸಾಫ್ಟ್‌ವೇರ್ ಡೆವಲೆಪ್‌ಮೆಂಟ್ ಶುರುವಾದಾಗ ಇದು ಮನುಷ್ಯನನ್ನು ಅಪಾಯಕ್ಕೆ ತಳ್ಳುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ, ಕಾಲಾನಂತರದಲ್ಲಿ ಜನರ ಉದ್ಯೋಗಗಳು ಜಾಸ್ತಿಯಾದವೇ ಹೊರತು, ಉದ್ಯೋಗಗಳ ಕೊರತೆ, ಕುಂಠಿತ ಆಗಲಿಲ್ಲ. ಹಾಗಾಗಿ, ಕೃತಕ ಬುದ್ಧಿಮತ್ತೆಯಿಂದ ಉದ್ಯೋಗಗಳ ಕಡಿತವಾಗುವುದಿಲ್ಲ. ಅದರಲ್ಲೂ, ಭಾರತವು ತಂತ್ರಜ್ಞಾನದ ಅಳವಡಿಕೆಯಲ್ಲಿ ಒಂದು ಹೆಜ್ಜೆ ಮುಂದಿದೆ. ಭಾರತೀಯರ ಎದುರು ಹಲವು ಸಾಧ್ಯತೆಗಳು ಇವೆ ಎಂದು ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದ ವೇಳೆ ನಾರಾಯಣ ಮೂರ್ತಿ ಹೇಳಿದ್ದಾರೆ.
ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಅವಶ್ಯಕತೆ, ಆಧುನಿಕ ಜಗತ್ತಿನಲ್ಲಿ ಅದರ ಬಳಕೆಯ ವ್ಯಾಪ್ತಿಯನ್ನು ನಾನು ಅರ್ಥ ಮಾಡಿಕೊಳ್ಳುತ್ತಿದ್ದೇನೆ. ಆದರೆ, ಇದು ಮನುಷ್ಯನ ಕೆಲಸಕ್ಕೆ ಪರ್ಯಾಯವಾಗುವುದಿಲ್ಲ. ಮನುಷ್ಯನ ಕೆಲಸದ ಬದಲಾಗಿ ಇದೇ ಕೆಲಸ ಮಾಡುವುದಿಲ್ಲ. ಮನುಷ್ಯನ ಮೆದುಳಿಗೆ ಸಮನಾಗಿ ಕೆಲಸ ಮಾಡುವ ತಂತ್ರಜ್ಞಾನ ಇದುವರೆಗೆ ಬಂದಿಲ್ಲ. ತಂತ್ರಜ್ಞಾನವು ಮನುಷ್ಯನ ಕೆಲಸವನ್ನು ಸುಲಭಗೊಳಿಸುವ ಸಾಧನವಾಗಿದೆ ಅಷ್ಟೆ. ಇದರಿಂದ ಉದ್ಯೋಗಗಳಿಗೆ ಕತ್ತರಿ ಬೀಳುತ್ತದೆ ಎಂದು ನನಗೆ ಅನಿಸುವುದಿಲ್ಲ ಎಂದರು.